ಮುಂಬಯಿ: ಇಷ್ಟು ವರ್ಷಗಳಿಂದಲೂ ಕಪ್ ನಮ್ದೇ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಅದನ್ನು ಸ್ವಲ್ಪ ಜೋರಾಗಿಯೇ ಹೇಳುವ ಸಂದರ್ಭ ಒದಗಿದೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 13 ರನ್‌ಗಳಿಂದ ಜಯ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ಕನಸಿಗೆ ಕಸುವು ತುಂಬಿದೆ. ಆದರೆ, ಈ ಸೋಲಿನೊಂದಿಗೆ ಚೆನ್ನೈ ಹಾದಿ ಇನ್ನಷ್ಟು ಕಠಿಣವಾಗಿದೆ.
ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿತು. ವಿರಾಟ್ ಕೊಹ್ಲಿ (30), ನಾಯಕ ಫಾಫ್ ಡುಪ್ಲೆಸಿಸ್ (22 ಎಸೆತಗಳಲ್ಲಿ 38) ಮೊದಲ ವಿಕೆಟ್‌ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ಮಹಿಪಾಲ್ ಲೋಮ್ರೋರ್ (42 ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್), ರಜತ್ ಪಾಟಿದಾರ್ (21) ಹಾಗೂ ದಿನೇಶ್ ಕಾರ್ತಿಕ್ ಆಜೇಯ 26 ರನ್ ನೆರವಿನೊಂದಿಗೆ ಆರ್‌ಸಿಬಿ 8 ವಿಕೆಟ್‌ಗೆ 173 ರನ್ ಗಳಿಸಿತು. ಚೆನ್ನೈ ಪರ ಮಹೀಶ್ ತೀಕ್ಷ್ಣ ಮೂರು ವಿಕೆಟ್ ಗಳಿಸಿದರು.
ಚೆನ್ನೈ ಆರಂಭವೂ ಉತ್ತಮವಾಗಿತ್ತು. ಡೇವಿಡ್ ಕಾನ್ವೇ ಅರ್ಧ ಶತಕ ಗಳಿಸಿದರು, 37 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ, 2 ಸಿಕ್ಸರ್ ಸಹಿತ 56 ರನ್ ಗಳಿಸಿದರು, ಮಿಕ್ಕಂತೆ ಋತುರಾಜ್ ಗಾಯಕ್ವಾಡ್ (28), ಮೊಯೀನ್ ಅಲಿ (34) ಹೊರತುಪಡಿಸಿ ಉಳಿದ ಬ್ಯಾಟ್ಸ್ ಮನ್‌ಗಳು ತರಗೆಲೆಗಳಂತೆ ಉದುರಿದ್ದರಿಂದ 20 ಓವರ್‌ಗಳು ಮುಗಿದಾಗ ಚೆನ್ನೈ 8 ವಿಕೆಂಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು. ಮ್ಯಾಕ್ಸ್ ವೆಲ್ 2 ವಿಕೆಟ್ ಪಡೆದರು. ಪ್ರಮುಖ ಮೂರು ವಿಕೆಟ್ ಕಿತ್ತ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು,
ಗುರುವಾರ ಟಾಟಾ ಐಪಿಎಲ್‌ನ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಮುಖಾಮುಖಿಯಾಗಲಿವೆ.