ಬೆಂಗಳೂರು,ಜೂ. 29:
ಗ್ರಾಮೀಣ ಪ್ರದೇಶದಲ್ಲಿ ಜನನ ಹಾಗೂ ಮರಣ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ 30 ದಿನಗಳ ಒಳಗೆ ಜನನ-ಮರಣ ಘಟನೆಗಳನ್ನು ನೋಂದಾಯಿಸುವ ಸಲುವಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಜನನ, ಮರಣ ಉಪ ನೋಂದಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಜನನ, ಮರಣ ನೋಂದಣಿಗೆ ಸಂಬಂಧಿಸಿದ ಅಧಿನಿಯಮ ಹಾಗೂ ನಿಯಮಗಳು ಮತ್ತು ನೋಂದಣಿಗೆ ಬಳಸಲಾಗುತ್ತಿರುವ ಇ-ಜನ್ಮ ತಂತ್ರಾಂಶದ ಬಗ್ಗೆ ತರಬೇತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, 21 ದಿನಗಳ ತರುವಾಯ ಮತ್ತು 30 ದಿನಗಳ ಒಳಗಿನ ಘಟನೆಗಳನ್ನು ನಿಯಮಗಳಂತೆ 2ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು ಎಂದು ತಿಳಿಸಿದರು
30 ದಿನಗಳ ತರುವಾಯ ಒಂದು ವರ್ಷದೊಳಗೆ ವರದಿಯಾಗುವ ಜನನ, ಮರಣಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು. ಒಂದು ವರ್ಷ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ಮ್ಯಾಜಿಸ್ಟ್ರೇಟ್ ಅವರ ಆದೇಶದೊಂದಿಗೆ 10 ರೂ. ತಡೆ ಶುಲ್ಕ ಪಡೆದು ನೋಂದಾವಣೆ ಮಾಡಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈಗ 72 ಸೇವೆಗಳು ಲಭ್ಯವಿದ್ದು, ಜನನ, ಮರಣ ನೋಂದಣಿ 73ನೆ ಸೇವೆಯಾಗಿ ಸೇರ್ಪಡೆಗೊಳ್ಳುತ್ತಿದೆ. ಇದೂ ಸೇರಿ ಒಟ್ಟು 9 ಸೇವೆಗಳನ್ನು ಜನನ, ಮರಣ ನೋಂದಣಿಗೆ ಸೇರಿದಂತೆ ಒದಗಿಸಲಾಗುತ್ತಿದೆ. ಜನನ ನೋಂದಣಿ, ಜನನ ಪ್ರಮಾಣ ಪತ್ರ ತಿದ್ದುಪಡಿ, ಜನನ ಪ್ರಮಾಣ ಪತ್ರ ವಿತರಣೆ, ಮಗುವಿನ ಹೆಸರು ಸೇರ್ಪಡೆ, ನಿರ್ಜೀವ ಜನನ ನೋಂದಣಿ, ನಿರ್ಜೀವ ಜನನ ಪ್ರಮಾಣ ಪತ್ರ ವಿತರಣೆ, ಮರಣ ನೋಂದಣಿ, ಮರಣ ಪ್ರಮಾಣ ಪತ್ರ ತಿದ್ದುಪಡಿ ಹಾಗೂ ಮರಣ ಪ್ರಮಾಣ ಪತ್ರ ವಿತರಣೆ ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರದಲ್ಲಿ ಒದಗಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.
Previous Articleವಾಲ್ಮೀಕಿ ನಿಗಮ ಹಗರಣ-ಬಗೆದಷ್ಟು ಆಳ.
Next Article ಹೊಸ ಕಾನೂನಿನ ಅನ್ವಯ ಮೊದಲ FIR ಯಾರ ಮೇಲೆ ಗೊತ್ತಾ.?