ಬೆಂಗಳೂರು,ಜು.17 :
ಬೆಂಗಳೂರು ಕೊಯಮತ್ತೂರು ಸೇರಿದಂತೆ ದೇಶದ ಹಲವೆಡೆ ನಡೆದ ವಿಧ್ವಂಸಕ ಕೃತ್ಯಗಳ ಆರೋಪದಲ್ಲಿ ಬಂದಿತನಾಗಿ ಜೈಲು ಸೇರಿರುವ ಲಷ್ಕರ್ ಉಗ್ರ ಟಿ. ನಾಸಿರ್ ಜೈಲಿನಲ್ಲಿಯೇ ಹಲವರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿದ್ದಾನೆ.
ಪರಪ್ಪನ ಅಗ್ರಹಾರ ಜೈಲಿನ ವೈದ್ಯ ಮತ್ತು ಸಿ ಎ ಆರ್ ಪೋಲಿಸ್ ಅಧಿಕಾರಿಯ ನೆರವಿನೊಂದಿಗೆ ಜೈಲಿನಿಂದ ಬಾಂಗ್ಲಾದೇಶಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದ ಈತ ಜೈಲಿನಲ್ಲಿ ನಡೆಸಿದ್ದ ಹಲವು ಅಕ್ರಮಗಳು ಬೆಳಕಿಗೆ ಬಂದಿದೆ.
ಸಾಕಷ್ಟು ಪ್ರಭಾವಶಾಲಿ ಯಾಗಿದ್ದು, ಆತನ ಅಣತಿಯಂತೆ ಕೆಲಸ ಮಾಡುವ ಸಾಕಷ್ಟು ಮಂದಿ ಬೆಂಗಳೂರು ನಗರ ಸೇರಿದಂತೆ ದೇಶದ ಹಲವಡೆ ಇದ್ದಾರೆ ಎನ್ನಲಾಗಿದೆ. ಉಗ್ರ ಸಂಘಟನೆ ಸೇರಿದ ಯುವಕರಿಗೆ ಈತ ಅಪಾರ ಪ್ರಮಾಣದ ಹಣ ಪೂರೈಸುತ್ತಿದ್ದ ಎಂಬ ಅಂಶ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ
ಪರಪ್ಪನ ಅಗ್ರಹಾರ ಜೈಲಿಗೆ ವಿವಿಧ ಅಪರಾಧಗಳಲ್ಲಿ ಕೈದಿಗಳಾಗಿ ಬರುತ್ತಿದ್ದ ಯುವಕರನ್ನು ಸಂಪರ್ಕಿಸುತಿದ್ದ. ತನ್ನ ಸಂಘಟನೆ ಪರ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದ ಯುವಕರಿಗೆ ಹಣ ಕೊಡುವುದಾಗಿ ನಂಬಿಸುತ್ತಿದ್ದ. ಕೆಲವರು ನೀನು ಜೈಲಿನಲ್ಲಿದ್ದು ಹೇಗೆ ಹಣ ಕೊಡುತ್ತಿಯಾ? ಎಂದು ಪ್ರಶ್ನಿಸಿದರೆ, 24 ಗಂಟೆಯೊಳಗೆ ಜೈಲಿನ ಅಧಿಕಾರಿ- ಸಿಬಂದಿ ಸಹಕಾರದಿಂದಲೇ ಹಣವನ್ನು ತರಿಸಿಕೊಂಡು ಕೊಡುತ್ತಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ
ಆ ಬಳಿಕ ಆ ಯುವಕರು ಜೈಲಿನ ಹೊರಗಡೆ ಆತನ ಪರವಾಗಿ ಅಕ್ರಮ ಚಟುವಟಿಕೆ ನಡೆಸಿದರೆ 50,000 ರೂ.ನಿಂದ 1 ಲಕ್ಷ ರೂ. ವರೆಗೂ ಹಣ ನೀಡಿರುವ ಮಾಹಿತಿ ಇದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಾಸೀರ್‌ನನ್ನು ಪರ ಪ್ಪನ ಅಗ್ರಹಾರ ಜೈಲಿನ ಹೈಸೆಕ್ಯೂರಿಟಿ ಜೈಲಿನಲ್ಲಿ ಇರಿಸಲಾಗಿದೆ. ಆದರೆ ಪ್ರತೀ ಶುಕ್ರವಾರ ಜೈಲಿನ ಒಂದು ಆವರಣದಲ್ಲಿ ಮುಸ್ಲಿಂ ಸಮುದಾಯದ ಸಜಾ ಬಂದಿ, ವಿಚಾ ರಣಾಧೀನ ಕೈದಿಗಳಿಗೆ ಒಟ್ಟಿಗೆ ವಿಶೇಷ ಪ್ರಾರ್ಥನೆಗೆ ಅವಕಾಶವಿದೆ.
ಅದನ್ನು ದುರುಪಯೋಗ ಪಡಿಸಿಕೊಂಡಿರುವ ನಾಸೀರ್, ಕಳ್ಳತನ, ದರೋಡೆ, ಸುಲಿಗೆಯಂತಹ ಹಣಕಾಸಿನ ಪ್ರಕರಣಗಳಲ್ಲಿ ಜೈಲು ಸೇರಿರುವ ಯುವಕರನ್ನು ಪರಿಚಯಿಸಿಕೊಂಡು ಅವರ ಹಿನ್ನೆಲೆ ಹಾಗೂ ಆರ್ಥಿಕ ಪರಿಸ್ಥಿತಿ ತಿಳಿದುಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ನಾಸೀರ್, ಜೈಲಿನ ಅಧಿಕಾರಿ-ಸಿಬ್ಬಂದಿಗೆ ಹಣದ ಆಮಿಷವೊಡ್ಡಿ, ತಾನು ಆಯ್ಕೆ ಮಾಡಿಕೊಂಡಿದ್ದ ಯುವಕರನ್ನು ತನ್ನ ಬ್ಯಾರಕ್ ಬಳಿ ಕರೆಸಿಕೊಳ್ಳುತ್ತಿದ್ದ. ಅನಂತರ ಅವರಿಗೆ ಎಲ್‌ಇಟಿ ಸಂಘಟನೆ ಬಗ್ಗೆ ಪ್ರಚೋದನೆ ನೀಡುತ್ತಿದ್ದ. ಅಲ್ಲದೆ ಜೈಲಿನಿಂದ ಬಿಡುಗಡೆ ಆಗಲು ಹಾಗೂ ಹೊರಗೆ ಹೋದ ಬಳಿಕ ಅವರಿಗೆ ತನ್ನ ಸಹಚರರ ಮೂಲಕ ಆರ್ಥಿಕವಾಗಿ ನೆರವಾಗಿದ್ದಾನೆ. ಹೀಗಾಗಿ ಸುಮಾರು ಆರೇಳು ವರ್ಷಗಳಲ್ಲಿ ಸುಮಾರು 20-30 ಮಂದಿ ಯುವಕರು ಸಂಘಟನೆ ಪರವಾಗಿ ಕೆಲಸ ಮಾಡಿದ್ದಾರೆ.
ಈ ಎಲ್ಲರ ಮಾಹಿತಿಯನ್ನು ಸಂಗ್ರಹಿಸಿರುವ ಎನ್ಐಎ ಪೊಲೀಸರು ತನಿಖೆ ಶುರುಗೊಳಿಸಿದ್ದಾರೆ.

