ಬೆಂಗಳೂರು,ಮೇ.21:
ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಇದೀಗ ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಕ್ರಮ ಹಣಕಾಸು ವಹಿವಾಟು ಆರೋಪದಲ್ಲಿ ಪರಮೇಶ್ವರ್ ಅವರ ಒಡೆತನದ ವಿದ್ಯಾಸಂಸ್ಥೆಗಳು ಮತ್ತು ಅವುಗಳ ಹಿರಿಯ ಸಿಬ್ಬಂದಿಯ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಪ್ರತ್ಯೇಕವಾಗಿ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ, ಮರಳೂರು ದಿಣ್ಣೆಯಲ್ಲಿರುವ ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ಹೆಗ್ಗೆರೆಯಲ್ಲಿರುವ ಪರಮೇಶ್ವರ್ ಅವರ ಹುಟ್ಟೂರಿನ ಮನೆ, ತುಮಕೂರಿನ ಹೊರವಲಯದಲ್ಲಿರುವ ಹಳೆಯ ಎಚ್ಎಂಎಸ್ ಕಾಲೇಜು, ಮತ್ತು ನೆಲಮಂಗಲದ ಬಳಿಯಿರುವ ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಈ ಪ್ರದೇಶಗಳಲ್ಲಿ ಸಾರ್ವಜನಿಕ ಹೋರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹಣಕಾಸು ವಹಿವಾಟಿಕೆ ಸಂಬಂಧಿಸಿದಂತೆ ಕೆಲವು ಲೆಕ್ಕಪತ್ರಗಳನ್ನು ಪರಿಶೀಲತೆ ವಶಕ್ಕೆ ಪಡೆದುಕೊಂಡಿದ್ದಾರೆ
ಚಿನ್ನ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿರುವ ರನ್ಯಾರಾವ್ ಪ್ರಕರಣ ಹಾಗೂ ಇತ್ತೀಚೆಗೆ ಪರಮೇಶ್ವರ ಅವರು ಖರೀದಿಸಿರುವ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಪರಮೇಶ್ವರ್ ಅವರು ತುಮಕೂರಿನ ಹೊರವಲಯದಲ್ಲಿರುವ ಎಚ್ ಎಂಎಸ್ ಇಂಜಿನಿಯರಿಂಗ್ ಕಾಲೇಜನ್ನು ಕಾಂಗ್ರೆಸ್ ಮಾಜಿ ಶಾಸಕ ಶಫಿ ಅಹಮ್ಮದ್ ಅವರಿಂದ ಖರೀದಿಸಿದ್ದರು. ಈ ವೇಳೆ ಭಾರಿ ಪ್ರಮಾಣದ ಹಣಕಾಸಿನ ವಹಿವಾಟು ನಡೆದಿತ್ತು ಎಂದು ತಿಳಿದುಬಂದಿದೆ.
ಜೊತೆಗೆ ಮೈಸೂರಿನಲ್ಲಿ ಅಂತರಾಷ್ಟ್ರೀಯ ವಸತಿ ಶಾಲೆಯೊಂದನ್ನು ಪರಮೇಶ್ವರ್ ಆರಂಭಿಸಿದ್ದರು. ಜೊತೆಗೆ ಕೆಲವರು ಆಸ್ತಿಗಳ ವಹಿವಾಟುಗಳು ನಡೆದಿರುವ ಮಾಹಿತಿಗಳಿವೆ
ಸಿದ್ದಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಇಂಜಿನಿಯರಿಂಗ್ ಕಾಲೇಜಿಗೆ ದೇಶದ ವಿವಿಧ ರಾಜ್ಯಗಳಿಂದಷ್ಟೇ ಅಲ್ಲದೆ ವಿದೇಶಿ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಬೇರೆಬೇರೆ ಸ್ವರೂಪಗಳಲ್ಲಿ ಹಣಕಾಸಿನ ವಹಿವಾಟುಗಳು ನಡೆಯುತ್ತವೆ. ಅದರಲ್ಲಿ ಕೆಲವು ಪಿಎಂಎಲ್‌ಎ ಕಾಯ್ದೆಗೆ ವ್ಯಾಪ್ತಿಗೊಳಪಡಲಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.
ರಾಜಕೀಯ ಪ್ರೇರಿತ:
ಇನ್ನು ತಮ್ಮ ಒಡೆತನದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿರುವ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಗೃಹ ಸಚಿವ ಪರಮೇಶ್ವರ್ ನಿರಾಕರಿಸಿದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದು ರಾಜಕೀಯ ಪ್ರೇರಿತ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮೇಶ್ವರ ಅವರು ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ. ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ ಅವರ ಸಂಸ್ಥೆಯಲ್ಲಿ ಬೇರೆ ಯಾರೋ ಮಾಡಿರುವ ವಹಿವಾಟಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ತಿಳಿಸಿದರು.
ಅಕ್ರಮದ ಕಾರಣಕ್ಕೆ ದಾಳಿ:
ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ
ಜಾರಿ ನಿರ್ದೇಶನಾಲಯ, ಸಿಬಿಐ ಸ್ವಾಯತ್ತ ಸಂಸ್ಥೆಗಳು. ಅವು ತಮ್ಮ ಕೆಲಸ ತಾವು ಮಾಡುತ್ತಿರುತ್ತವೆ. ಅವು ನಡೆಸುವ ದಾಳಿಗಳು ರಾಜಕೀಯ ಪ್ರೇರಿತ ಎನ್ನಲಾಗದು’ ಎಂದು ಹೇಳಿದರು.
ಇ.ಡಿ., ಸಿಬಿಐ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸ್ಥಾಪಿಸಿದ ಸಂಸ್ಥೆಗಳು.ಆದಾಯ ಮೀರಿ ಆಸ್ತಿಯಿದ್ದರೆ ಅವು ಪರಿಶೀಲಿಸುತ್ತವೆ. ಅವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂಥ ನೋಡಲ್ಲ. ಅಲ್ಲಿ ಅಂಥದ್ದು ಏನೂ ಸಿಗದಿದ್ದರೆ ಮುಗಿಯಿತು. ಭಯ ಯಾಕೆ’ ಎಂದು ಪ್ರಶ್ನಿಸಿದರು.
ಅವು ಕೆಲಸ ಮಾಡದಿದ್ದರೆ ತಪ್ಪು. ಅದನ್ನು ಪ್ರಶ್ನಿಸಬೇಕು. ಆದರೆ, ದಾಳಿ ನಡೆಸಿದಾಗ ಪ್ರಶ್ನಿಸಿದರೆ ಹೇಗೆ? ಅವುಗಳಿಂದ ತೊಂದರೆ ಆಗುತ್ತಿದ್ದರೆ, ಅವುಗಳನ್ನು ತೆಗೆದುಹಾಕುವಂತೆ ಕಾಂಗ್ರೆಸ್ ಪತ್ರ ಬರೆಯಲಿ’ ಎಂದು ಸವಾಲು ಹಾಕಿದರು.
Previous Articleಶಾಶ್ವತ ಪರಿಹಾರಕ್ಕೆ ಡಿಸಿಎಂ ಸಂಕಲ್ಪ
Next Article ಡಾ.ಸಲೀಂ ರಾಜ್ಯ ಪೊಲೀಸ್ ನೂತನ ಸಾರಥಿ
