ಸಲಿಂಗ ವಿವಾಹಕ್ಕೆ (same sex marriage) ಸಂಬಂಧಪಟ್ಟಂತೆ ಯಾವುದೇ ಕಾನೂನು ಸಕ್ರಮದ ನಿಲುವಿಗೆ ತನ್ನ ವಿರೋಧವನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದ ಒಂದು ದಿನದ ನಂತರ, ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ವಿನಂತಿಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಪ್ರಾರಂಭಿಸಿದೆ. ಸಲಿಂಗ ವಿವಾಹಗಳಿಗೆ ಕಾನೂನಿನ ಅನುಮತಿಯ ವಿರುದ್ಧ ವಾದಿಸುತ್ತಾ, ಕೇಂದ್ರವು ನಿನ್ನೆ ಅಂತಹ ವಿನಂತಿಗಳು “ಸಾಮಾಜಿಕ ವಲಯದಲ್ಲಿ ಸ್ವೀಕೃತವಾಗಲು ಕೇವಲ ನಗರದಲ್ಲಿರುವ ಮೇಲ್ಸ್ತರದಲ್ಲಿರುವ ಜನರ ಬೇಡಿಕೆಗಳು” ಎಂದು ಹೇಳಿ ಅಂಥಾ ಕಾನೂನುಗಳನ್ನು ಮಾಡಲು ಸಂಸತ್ತು ಮಾತ್ರ ಸಮರ್ಥವಾಗಿದೆ ಎಂದು ತನ್ನ ವಾದ ಮಂಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಇಂದು ಸಲಿಂಗ ವಿವಾಹಕ್ಕೆ ಕಾನೂನಿನ ಸಮ್ಮತಿ ಬೇಡಿದ ಅರ್ಜಿಗಳ ವಿಚಾರಣೆಯನ್ನು ನಡೆಸಿದೆ.
ಸುಪ್ರೀಂ ಕೋರ್ಟ್ ಏನೇ ನಿರ್ಧರಿಸಿದರೂ ಸಾಮಾಜಿಕ ವಾಗಿ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುವ ಯಾವುದೇ ಕಾನೂನು ಅಥವ ಕಾನೂನಾತ್ಮಕ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. ಅದನ್ನು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ. ಆದರೆ ಈ ಅರ್ಜಿಗಳ ವಿಚಾರಣೆಯ ಮುಂದುವರೆದ ಭಾಗವಾಗಿ ಸಂಸತ್ತು ಮತ್ತು ಸರ್ಕಾರ ಇದರ ಬಗ್ಗೆ ಒಂದಷ್ಟು ಆಳವಾದ ಚಿಂತನೆಯನ್ನು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆಶಿಸಿದೆ.
ಪುರುಷನೊಂದಿಗೆ ಪುರುಷ ಸ್ತ್ರೀಯೊಂದಿಗೆ ಸ್ತ್ರೀ ಮದುವೆಯಾಗುವುದು ಭಾರತದಲ್ಲಿ ಅಲ್ಲೋ ಇಲ್ಲೂ ನಡೆದು ಅಂಥಾ ಸುದ್ದಿಗಳು ಒಂದಷ್ಟು ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಭಾರತದಲ್ಲಿ ಲಕ್ಷಾಂತರ ಮಂದಿ ಇಂಥಾ ಸಂಬಂಧಕ್ಕೆ ಸಿದ್ಧವಿರುವರೆನ್ನುವ ಹಿನ್ನೆಲೆಯಲ್ಲಿ ಸಲಿಂಗ ಮದುವೆಯನ್ನು ಕಾನೂನುಬದ್ಧಗೊಳಿಸಬೇಕೇ ಬೇಡವೇ ಎನ್ನುವ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆದಿದೆ.
ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಸಲಿಂಗ ಕಾಮ ಅನೈತಿಕ ಮತ್ತು ಅಕ್ರಮ ನಡವಳಿಕೆ ಅಲ್ಲ ಎಂದು ಹೇಳಿ ತೀರ್ಪು ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವಿಶ್ವದಲ್ಲಿ ೩೩ ರಾಷ್ಟ್ರಗಳಲ್ಲಿ ಸಲಿಂಗ ವಿವಾಹ ಕಾನೂನು ಸಮ್ಮತವಾಗಿದೆ.