ಬೆಂಗಳೂರು,ಸೆ.8-ಗಾಂಜಾ ಗ್ಯಾಂಗ್ ಬಂಧನಕ್ಕೆ ಬೆನ್ನತ್ತಿ ಹೋಗಿದ್ದಾಗ ಆಂಧ್ರಪ್ರದೇಶದ ಚಿತ್ತೂರು ಬಳಿ ಕಾರು ಅಪಘಾತ ಸಂಭವಿಸಿ ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ಸೇರಿ ಮೂವರು ದಾರುಣ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು ಸಿಬ್ಬಂದಿಗಳ ರಾತ್ರಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಕಾನೂನು ಸುವ್ಯವಸ್ಥೆ ಬಂದೋ ಬಸ್ತ್, ಚುನಾವಣಾ ಕರ್ತವ್ಯ, ಅಪರಾಧ ಪ್ರಕರಣಗಳ ತನಿಖಾ ಸಂಬಂಧ ಹಾಗೂ ಇನ್ನಿತರ ಅನ್ಯ ಕಾರ್ಯದ ಮೇಲೆ ನಿಯೋಜನೆಗೊಳ್ಳುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ವಾಹನದಲ್ಲಿ ಕರ್ತವ್ಯದ ನಿಮಿತ್ತ ಅಥವಾ ಕರ್ತವ್ಯದಿಂದ ಬಿಡುಗಡೆಯಾದ ನಂತರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಯಾಣ ಮಾಡದಂತೆ ಆದೇಶಿಸಲಾಗಿದೆ.
ಸಿಐಡಿ ಕಚೇರಿಯಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಸಿಐಡಿ ಡಿಜಿಪಿ ಆದೇಶ ಹೊರಡಿಸಿದ್ದಾರೆ.
ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿಯಲ್ಲದೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು, ಸಿಎಆರ್, ಡಿಎಆರ್, ಕೆಎಸ್ಸಾರ್ಪಿ ಹಾಗೂ ಇತರೆ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಯೂ ರಾತ್ರಿ ಪ್ರಯಾಣದ ವೇಳೆ ಅಪಘಾತಗಳಾಗಿ ಮೃತಪಟ್ಟಿರುವ ಉದಾಹರಣೆಗಳಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಪ್ರಕಾರ ದೇಶದಲ್ಲಿ 2021ರಲ್ಲಿ ವಿವಿಧ ದರ್ಜೆಯ 427 ಅಧಿಕಾರಿ, ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಲ್ಲಿ 339 ಮಂದಿ ರಸ್ತೆ ಅಪಘಾತಗಳಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ದೇಶದಲ್ಲಿ ಒಟ್ಟಾರೆ ಕರ್ತವ್ಯದ ವೇಳೆ 1,632 ಮಂದಿ ಗಾಯಗೊಂಡಿದ್ದಾರೆ. ರಸ್ತೆ ಅಪಘಾತಗಳಲ್ಲಿ 372 ಅಧಿಕಾರಿ ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ. ಕರ್ನಾಟಕದಲ್ಲಿ ನಾಲ್ವರು ಮೃತಪಟ್ಟಿದ್ದರೆ 25 ಮಂದಿ ಗಾಯಗೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ಪೊಲೀಸರ ಹಿತದೃಷ್ಟಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸುವ ಆದೇಶ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Previous Articleಹೆದ್ದಾರಿಗಳ ಅಭಿವೃದ್ಧಿಗೆ ನೀಲ ನಕ್ಷೆ
Next Article ದಿನೇಶ್ ಗುಂಡೂರಾವ್ ಮನೆಕೆಲಸದ ವ್ಯಕ್ತಿ ಎಲ್ಲಿ?