ಬೆಂಗಳೂರು,ಮೇ.1-
ಲೈಂಗಿಕ ಕಿರುಕುಳ ಆರೋಪದ ಸುಳಿಗೆ ಸಿಲುಕಿರುವ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ.ಇವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಈ ಸಂಬಂಧ ಮಕ್ಕಳ ಹಕ್ಕು ಆಯೋಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ದೂರುದಾರರಾದ ಸಂತ್ರಸ್ತ ಮಹಿಳೆಯ ಮಗಳ ಹೇಳಿಕೆಯನ್ನು ಪಡೆಯಲು ತಯಾರಿ ನಡೆಸಲಾಗುತ್ತಿದೆ. ಮಕ್ಕಳ ಹಕ್ಕು ಆಯೋಗದ ಕೌನ್ಸಿಲರ್‌ಗಳ ಸಮ್ಮುಖದಲ್ಲಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸಲಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದ್ದರೆ ಈ ಸಂಬಂಧ ಹೇಳಿಕೆಯನ್ನು ಪಡೆಯುವಾಗ ಕಡ್ಡಾಯವಾಗಿ ಮಕ್ಕಳ ಹಕ್ಕು ಆಯೋಗದ ಸದಸ್ಯರು ಇರಬೇಕು. ನೇರವಾಗಿ ಪೊಲೀಸರು ಹೇಳಿಕೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಇಂದು ಅಥವಾ ನಾಳೆ ಸಂಜೆಯೊಳಗೆ ಅಧಿಕಾರಿಗಳು ಹೇಳಿಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆಯಲ್ಲಿ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ.ಅಷ್ಟೇ ಅಲ್ಲ ಕೆಲವು ಸಂತ್ರಸ್ತರು ತಮಗೆ ವಿಚಾರಣೆ ಹೆಸರಲ್ಲಿ ತೊಂದರೆ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದೆ. ಇದರ ಜತೆಗೆ ವಿಡಿಯೋ ಸೋರಿಕೆ ವೇಳೆ ಸಂತ್ರಸ್ತೆಯರ ಮುಖವನ್ನು ಬ್ಲರ್ ಮಾಡಲಾಗಿಲ್ಲ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಹೊರಗಡೆ ತಲೆ ಎತ್ತಿ ತಿರುಗುವಂತೆ ಆಗುತ್ತಿಲ್ಲ. ಈ ಮಧ್ಯೆ ಎಸ್‌ಐಟಿ ಅಧಿಕಾರಿಗಳು ತನಿಖೆಗಾಗಿ ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲು ಹೋದರೆ ಮೊದಲೇ ನೊಂದಿರುವ ನಮ್ಮನ್ನು ಮತ್ತಷ್ಟು ನೋಯಿಸಬೇಡಿ. ಈ ಬಗ್ಗೆ ನಮ್ಮ ಬಳಿ ಏನನ್ನೂ ಕೇಳಬೇಡಿ. ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಅಷ್ಟಕ್ಕೂ ನೀವು ಒತ್ತಾಯ ಮಾಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಡಿಯೊದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ಎಸ್‌ಐಟಿ ತಂಡವು ಸಾಕಷ್ಟು ಪ್ರಯತ್ನಪಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಮಾತ್ರ ಸ್ಪಂದಿಸುತ್ತಿಲ್ಲ. ನಾವು ಏನೂ ಹೇಳಲ್ಲ, ಏನನ್ನೂ ಕೇಳಬೇಡಿ ಎಂದು ಸಂತ್ರಸ್ತೆಯರು ಹೇಳುತ್ತಿದ್ದಾರೆ.
ನಾವೇನು ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರುತ್ತೀರಿ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಹೇಳುತ್ತಿರುವುದರಿಂದ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹೀಗಾಗಿ ಸದ್ಯಕ್ಕೆ ದೂರುದಾರೆ ಸಂತ್ರಸ್ತೆಯ ಮಾಹಿತಿ ಆಧರಿಸಿ ತನಿಖೆಯನ್ನು ಮುನ್ನಡೆಸುವ ತೀರ್ಮಾನಕ್ಕೆ ಬರಲಾಗಿದೆ.