ಬೆಂಗಳೂರು:
‘ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa), ಮತ್ತು ನನ್ನ ಬಗ್ಗೆ ಕೆಲವರು ಅನುಕಂಪದ ಮಾತುಗಳನ್ನು ಹೇಳುವ ಮೂಲಕ ನಮ್ಮ ಪಕ್ಷದಲ್ಲಿ ಬೆಂಕಿ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು BJP ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (B Y Vijayendra) ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂತಹ ಗೊಂದಲಕಾರಿ ಹೇಳಿಕೆಗಳು, ಅಭಿಪ್ರಾಯಗಳಿಗೆ ಆಸ್ಪದ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟ ಪಡಿಸಿದರು. ‘ರಾಜ್ಯದ BJP ಯ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 140ರಿಂದ 150 ಶಾಸಕ ಸ್ಥಾನ ಗೆಲ್ಲುವುದೇ ಎಲ್ಲರ ಗುರಿಯಾಗಿದೆ’ ಎಂದು ಹೇಳಿದರು.
‘BJP ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಬೇಕೆಂಬ ಉದ್ದೇಶದಿಂದ ಹಲವು ಸಮಿತಿಗಳನ್ನು ಮಾಡಲಾಗಿದೆ. ತಮಗೆ ಮೋರ್ಚಾಗಳ ಉಸ್ತುವಾರಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಮಾಡಲಾಗುವುದು’ ಎಂದು ತಿಳಿಸಿದರು. ‘ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಎಲ್ಲ ಮೋರ್ಚಾಗಳ ಸಮಾವೇಶ ನಡೆಸಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಪ್ರವಾಸದ ವಿವರವನ್ನು ತಿಳಿಸುತ್ತೇವೆ’ ಎಂದರು.
‘ಪ್ರತಿಪಕ್ಷಗಳು ದಿವಾಳಿಯಾಗಿವೆ. ತಮ್ಮ ಸಾಧನೆ ಏನು? ಜನರಿಗೆ ಏನು ಹೇಳಬೇಕು ಎಂಬ ಗೊಂದಲದಲ್ಲಿರುವ Congress ಮತ್ತು JDS ಪಕ್ಷಗಳು ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ’ ಎಂದು ದೂರಿದರು. ‘ಯಾವ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಅರಿತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಏನೇ ಹೇಳಿಕೆ ಕೊಟ್ಟರೂ ಕೂಡ ರಾಜ್ಯದ ಪ್ರಜ್ಞಾವಂತ ಮತದಾರರು ಮತ್ತೊಮ್ಮೆ BJP ಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಈ ಹಿಂದೆ ಅಧಿಕಾರದಲ್ಲಿದ್ದಾಗ ವೀರಶೈವ ಸಮಾಜದ ಕುರಿತು ಯಾರ್ಯಾರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ’ ಎಂದು ನುಡಿದರು. ‘ರಾಜ್ಯಕ್ಕೆ ಕೇಂದ್ರದ ಕೊಡುಗೆಗಳು, ಸಾಧನೆಗಳ ಕುರಿತು ಸಮಾವೇಶದಲ್ಲಿ ಜನರ ಗಮನಕ್ಕೆ ತರಲಿದ್ದೇವೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಹೇಳಿಕೆ ಕೊಡುವುದು ಸಹಜ. ಮೋರ್ಚಾಗಳ ಸಮಾವೇಶದಲ್ಲಿ ಜನರಿಗೆ ಸಾಧನೆಗಳ ಮನವರಿಕೆ ಮಾಡಿಕೊಡುತ್ತೇವೆ’ ಎಂದು ತಿಳಿಸಿದರು.

