ಬೆಂಗಳೂರು,ನ.10- ಕೆಂಪೇಗೌಡರ ಪ್ರತಿಮೆ ಅನಾವರಣ, ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ, ವಂದೇ ಭಾರತ್ ರೈಲಿಗೆ ಚಾಲನೆ, ಕನಕ ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ನಾಳೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಪ್ರಧಾನಿಗಳು ಪಾಲ್ಗೊಳ್ಳುವ ವಿಮಾನ ನಿಲ್ದಾಣ,ವಿಧಾನ ಸೌಧ,ರೈಲ್ವೆ ನಿಲ್ದಾಣವನ್ನು ಮುಂಜಾನೆಯಿಂದ ಕೇಂದ್ರ ಭದ್ರತಾ ಪಡೆಗಳು ವಶಕ್ಕೆ ಪಡೆಯಲಿದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ
ಬೆಳಿಗ್ಗೆ 8ರಿಂದ 11:30ರ ಅವಧಿಯಲ್ಲಿ ನಗರ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ನಗರ ರೈಲು ನಿಲ್ದಾಣದಿಂದ ಸಂಚರಿಸಬೇಕಿದ್ದ ಹಲವು ರೈಲುಗಳನ್ನು ಯಶವಂತಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಅವಧಿಯಲ್ಲಿ ನಗರ ರೈಲು ನಿಲ್ದಾಣದಿಂದ ಸಂಚಾರ ಆರಂಭಿಸಬೇಕಿದ್ದ ರೈಲುಗಳು 12 ಗಂಟೆಯ ನಂತರ ಹೊರಡಲಿವೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ರೈಲು ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಪೊಲೀಸರು ಹಾಗೂ ರೈಲ್ವೆ ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಯಾವುದೇ ರೈಲುಗಳು ನಗರ ನಿಲ್ದಾಣಕ್ಕೆ ಬರುವುದಿಲ್ಲ. ಪ್ಲಾಟ್ಫಾರಂ 7 ಅಥವಾ 8ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತಲ ಪ್ರದೇಶದ ಭದ್ರತೆಗಾಗಿ 1200ಕ್ಕೂ ಹೆಚ್ಚು ರೈಲ್ವೆ ಪೊಲೀಸರನ್ನು ನೇಮಿಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಮೋದಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಹೆಲಿಕಾಪ್ಟರ್ನಲ್ಲಿ ಮೇಖ್ರಿ ಸರ್ಕಲ್ ಸಮೀಪದ ಏರ್ಫೋರ್ಸ್ ಕಮಾಂಡ್ಗೆ ಬರಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ನಗರ ರೈಲು ನಿಲ್ದಾಣಕ್ಕೆ ತೆರಳಲಿದ್ದಾರೆ. ಮಾರ್ಗದಲ್ಲಿ ಭದ್ರತೆಗಾಗಿ 6,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ನಗರದ ಎಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು,ಡಿಸಿಪಿಗಳು,ಎಸಿಪಿ,
ಇನ್ಸ್‌ಪೆಕ್ಟರ್ ಸಬ್ ಇನ್ಸ್‌ಪೆಕ್ಟರ್ ಸೇರಿ ಬಹುತೇಕ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ.
20 ಕೆಎಸ್ಆರ್ಪಿ ಹಾಗೂ ಸಿಎಆರ್ ತುಕಡಿಗಳು ಕಾರ್ಯನಿರ್ವಹಿಸಲಿವೆ. ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಕಾರು ಅಥವಾ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಪ್ರಧಾನಿ ಮೋದಿ ಬೆಳಗ್ಗೆ 9.5ಕ್ಕೆ ಹೆಲಿಕಾಫ್ಟರ್ ಮೂಲಕ ಮೇಕ್ರಿ ವೃತ್ತದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರಕ್ಕೆ ಆಗಮಿಸಿ 9.45ಕ್ಕೆ ವಿಧಾನಸೌಧಕ್ಕೆ ಆಗಮಿಸುವರು. 9.45ರಿಂದ 9.55ರವರೆಗೆ ಕನಕದಾಸ ಮತ್ತು ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ವಿಧಾನಸೌಧದಿಂದ ಬೆಳಗ್ಗೆ 10 ಗಂಟೆಗೆ ಹೊರಟು 10.20ಕ್ಕೆ ಸಂಗೊಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಮೋದಿ ಅವರು, ಭಾರತ್ ಗೌರವ್ ಕಾಶಿ ದರ್ಶನದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ರೈಲ್ವೆ ನಿಲ್ದಾಣದಿಂದ 10.45ಕ್ಕೆ ಮೇಕ್ರಿ ವೃತ್ತದಲ್ಲಿರುವ ಎಎಫ್‍ಟಿಸಿಸಿ ಹೆಲಿಪ್ಯಾಡ್‍ಗೆ ಬರಲಿದ್ದಾರೆ. ಅಲ್ಲಿಂದ 11 ಗಂಟೆಗೆ ಹೆಲಿಕಾಫ್ಟರ್ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ನಿರ್ಮಾಣಗೊಂಡಿರುವ 2ನೇ ಟರ್ಮಿನಲ್‍ನ್ನು 11.25ರಿಂದ 11.30ಕ್ಕೆ ಉದ್ಘಾಟಿಸಲಿದ್ದಾರೆ. ಈ ಮೂಲಕ ದೆಹಲಿ ಮತ್ತು ಮುಂಬೈ ಹೊರತುಪಡಿಸಿದರೆ ಎರಡನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪಾತ್ರವಾಗಲಿದೆ.
ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅವರು ಸಂಚರಿಸುವ ಮಾರ್ಗದ ರಸ್ತೆಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ.