ಬೆಂಗಳೂರು, ಅ.18-
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ,
ಗೋಪಾಲ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ ಮತ್ತು ಅಜಯ್ ಜೋಶಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರಿಂದ 2 ಕೋಟಿ ಸುಲಿಗೆ ಮಾಡಿದ್ದ ಆರೋಪದ ಅಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ ದಾಖಲಾಗುತ್ತಿದ್ದಂತೆ ಗೋಪಾಲ ಜೋಶಿ ನಾಪತ್ತೆಯಾಗಿದ್ದು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ದೇವಾನಂದ ಚೌಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್ ಅವರು ಬೆಂಗಳೂರಿನ ಬಸವೇಶ್ವರನಗರ ಪೊಲೀಸರಿಗೆ ದೂರು ನೀಡಿದ್ದು ದಾಖಲಾಗಿದೆ.
ದೇವಾನಂದ್ ಚವ್ಹಾಣ್ ಅವರು 2018ರಲ್ಲಿ ಜೆಡಿಎಸ್‌ನಿಂದ ಟಿಕೆಟ್ ಪಡೆದು ಜಯಗಳಿಸಿದ್ದರು. 2023ರ ಚುನಾವಣೆಯಲ್ಲಿ ಸೋತಿದ್ದರು. ನಂತರ, ಲೋಕಸಭೆ ಚುನಾವಣೆ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಅಥಣಿ ಎಂಜಿನಿಯರ್ ಶೇಖರ್ ನಾಯಕ್ ಎಂಬುವವರು ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರ ಪರಿಚಯ ಇರುವುದಾಗಿ ಹೇಳಿದ್ದರು. ಜತೆಗೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವ ಮಾಹಿತಿ ನೀಡಿದ್ದರು. ಹುಬ್ಬಳ್ಳಿಯ ಮನೆಗೆ ಕರೆದೊಯ್ದು ಗೋಪಾಲ್ ಜೋಶಿ ಅವರನ್ನು ಭೇಟಿ ಮಾಡಿಸಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ ಜೋಶಿ ಅವರ ವರ್ಚಸ್ಸು ತುಂಬಾ ಚೆನ್ನಾಗಿದೆ. ಅವರು ಹೇಳಿದಂತೆ ಮೋದಿ ಹಾಗೂ ಅಮಿತ್ ಶಾ ಇಬ್ಬರೂ ಕೇಳುತ್ತಾರೆ. ನನ್ನ ತಮ್ಮನ ಜತೆಗೆ ಮಾತನಾಡಿ, ನಿಮಗೆ ವಿಜಯಪುರ ಕ್ಷೇತ್ರಕ್ಕೆ ಬಿಜೆಪಿಯ ಟಿಕಟ್ ಕೊಡಿಸುತ್ತೇನೆ ಎಂದು ಗೋಪಾಲ್ ಜೋಶಿ ಭರವಸೆ ನೀಡಿದ್ದರು. 5 ಕೋಟಿ ಬೇಡಿಕೆ ಇಟ್ಟಿದ್ದರು. ಅಷ್ಟು ಹಣವಿಲ್ಲ ಎಂದಾಗ 25 ಲಕ್ಷ ಕೇಳಿದ್ದರು. ಚೆಕ್ ಸಹ ಪಡೆದಿದ್ದರು. ಆ ಹಣವನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿ ಇರುವ ವಿಜಯಲಕ್ಷ್ಮಿ ಅವರ ಮನೆಗೆ ತಲುಪಿಸಲಾಗಿತ್ತು. ನಂತರ, ಅಮಿತ್ ಶಾ ಅವರ ಆಪ್ತ ಸಹಾಯಕರ ಜತೆಗೆ ಮಾತನಾಡಿರುವುದಾಗಿ ಹೇಳಿದ್ದರು. ನಂತರ, ಟಿಕೆಟ್ ಕೊಡಿಸದೇ ಮೋಸ ಮಾಡಿದ್ದಾರೆ’ ಎಂದು ದೂರು ನೀಡಲಾಗಿದೆ.
ಬಂಧನಕ್ಕೆ ಕ್ರಮ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕುಟುಂಬದ ಸದಸ್ಯರ ಮೇಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೂರು ಬಂದ ಮೇಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದು ಸಹಜ. ಸದ್ಯಕ್ಕೆ ಗೋಪಾಲ್ ಜೋಷಿ ಹಾಗೂ ಇತರರು ನಾಪತ್ತೆಯಾಗಿದ್ದಾರೆ. ಮೂರು ಜನರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡುತ್ತಾರೆ ಎಂದರು.
ಟಿಕೆಟ್ ಗಾಗಿ ಲಂಚ ಪಡೆದ ಪ್ರಕರಣದಲ್ಲಿ ಗೋಪಾಲ್ ಜೋಷಿ ಅವರೊಂದಿಗೆ ಅವರ ಸಹೋದರರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಪಾತ್ರ ಇರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಏಕಾಏಕಿ ನಾವು ಈ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಮೊದಲು ಗೋಪಾಲ್ ಜೋಷಿಯನ್ನು ಬಂಧಿಸಬೇಕು, ಹೇಳಿಕೆ ಪಡೆಯಬೇಕು. ವಿಚಾರಣೆ ನಡೆದ ಬಳಿಕ ಕೇಂದ್ರ ಸಚಿವರ ನೇರ ಪಾತ್ರ ಇದೆಯೇ? ಅಥವಾ ಇಲ್ಲವೇ ಎಂಬುದನ್ನು ಹೇಳಲು ಸಾಧ್ಯ. ಚೈತ್ರಾ ಕುಂದಾಪುರ ಸೇರಿದಂತೆ ಇಂತಹ ಪ್ರಕರಣಗಳ ಕುರಿತು ವರದಿ ಬರದೆ ಮಾತನಾಡುವುದು ಸರಿಯಲ್ಲ ಎಂದರು.
ತನಿಖೆ:
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿ, ಪ್ರಕರಣದ ಬಗ್ಗೆ ಬಸವೇಶ್ವರನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಹೋದರ-ಸಹೋದರಿ ಸೇರಿದಂತೆ ಮೂವರು ಆರೋಪಿಗಳು ಹಂತ ಹಂತವಾಗಿ 2 ಕೋಟಿ ರೂ. ಹಣ ಪಡೆದುಕೊಂಡಿರುವುದು ಗೊತ್ತಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
Previous Articleಬಾಂಬ್ ಬೆದರಿಕೆ ಹಾಕಿದ್ದು ಯಾರು ಗೊತ್ತಾ.
Next Article ಬೆಂಗಳೂರಲ್ಲಿ Traffic jam ಕಡಿಮೆ ಮಾಡಲು ಏನೆಲ್ಲಾ ಕಸರತ್ತು.