ಶಿವಮೊಗ್ಗ,ಸೆ.23- ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಂದ ಬಾಂಬ್ ತಯಾರಿಗೆ ಬೇಕಿರುವ ಕಚ್ಚಾ ಸಾಮಗ್ರಿಗಳು,ಲ್ಯಾಪ್‌ಟಾಪ್,ಡಾಂಗಲ್, ಮೊಬೈಲ್ ಗಳು ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಶಂಕಿತ ಉಗ್ರರ ಬಂಧನ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಂಧಿತ ಶಂಕಿತ ಉಗ್ರರನ್ನು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.
ಪ್ರೇಮ್ಸಿಂಗ್ ಹತ್ಯೆ ಪ್ರಕರಣದಲ್ಲಿ ಜಬೀ ಬಂಧನವಾಗಿತ್ತು. ಜಬೀ ವಿಚಾರಣೆ ಮಾಡಿದಾಗ ಶಾರಿಕ್ ವಿಚಾರ ಬೆಳಕಿಗೆ ಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈವರೆಗೆ 11 ಸ್ಥಳಗಳಲ್ಲಿ ದಾಳಿ ಮಾಡಿ ಹಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರಿಂದ 14 ಮೊಬೈಲ್ ಮತ್ತು 1 ಡಾಂಗಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತರಿಂದ ಎರಡು ಲ್ಯಾಪ್‌ಟಾಪ್, ಒಂದು ಪೆನ್‌ಡ್ರೈವ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಸ್ಫೋಟದ ಸ್ಥಳದಲ್ಲಿ ಬಾಂಬ್‌ನ ಅವಶೇಷಗಳು ಪತ್ತೆಯಾಗಿವೆ. ಆಗಸ್ಟ್ ತಿಂಗಳಲ್ಲಿ ರಾಷ್ಟ್ರಧ್ವಜ ಸುಟ್ಟಿರುವ ಮಾಹಿತಿಯೂ ಲಭ್ಯವಾಗಿದೆ. ಬಂಧಿತರಿಂದ ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಬಂಧಿತರ ಮೂವರೂ ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ನಮಗೆ ಬ್ರಿಟೀಷರಿಂದ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ನೈಜ ಸ್ವಾತಂತ್ರ್ಯ ಇಲ್ಲ. ಇಸ್ಲಾಮಿಕ್ ಸ್ಟೇಟ್ ನಿರ್ಮಾಣ, ಷರಿಯಾ ಕಾನೂನುಗಳಿಂದ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂಧಿದ್ದರು. ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ ಆರೋಪಿಗಳು ನೈಜ ಬಾಂಬ್ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಕ್ರಿಪ್ಟೊ ಕರೆನ್ಸಿ ಮೂಲಕ ವಹಿವಾಟು ನಡೆಸಿದ್ದ ಮಾಹಿತಿಯೂ ಲಭ್ಯವಾಗಿದೆ ಎಂದು ಎಸ್ಪಿ ತಿಳಿಸಿದರು.
ಪಿಯುಸಿ ಓದುತ್ತಿರುವಾಗಲೇ ಸೈಯದ್ ಯಾಸಿನ್ಗೆ ಮಾಜ್ ಮುನೀರ್ ಅಹ್ಮದ್ ಎಂಬಾತನ ಪರಿಚಯವಾಗಿತ್ತು. ಅವನ ಮುಖಾಂತರ ಶಾರೀಖ್ ಪರಿಚಯವಾಯಿತು. ಶಾರೀಖ್ ಮುಸ್ಲಿಂ ಮೂಲಭೂತವಾದದ ಬಗ್ಗೆ ಸದಾ ಮಾತನಾಡುತ್ತಿದ್ದ. ಅಂಥದ್ದೇ ಫೈಲ್ಗಳನ್ನು ಹಂಚಿಕೊಳ್ಳುತ್ತಿದ್ದ ಎಂದರು.
ಐಸಿಸ್ (ಇಸ್ಲಾಮಿಕ್ ಸ್ಟೇಟ್) ಮಾದರಿಯಲ್ಲಿ ಭಯೋತ್ಪಾದಕ ಕೃತ್ಯ ಮುಂದುವರಿಸಲು ಆರೋಪಿಗಳು ಯೋಚಿಸಿದ್ದರು. ಕಾಫೀರರ (ಇಸ್ಲಾಂ ಧರ್ಮಕ್ಕೆ ಸೇರದವರು) ವಿರುದ್ಧ ಜಿಹಾದ್ ನಡೆಸಲು ಇವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಐಸಿಸ್ನ ಅಧಿಕೃತ ಅಲ್-ಹಯಾತ್ ಟೆಲಿಗ್ರಾಮ್ ಚಾನೆಲ್ಗೆ ಸದಸ್ಯರಾಗಿದ್ದರು.
ಶಾರೀಖ್ ಹಂಚಿಕೊಂಡಿದ್ದ ಫೈಲ್ಗಳಲ್ಲಿದ್ದ ಬಾಂಬ್ ತಯಾರಿಸುವ ವಿವರ ಅಭ್ಯಾಸ ಮಾಡಿದ್ದ ಇತರರು ಅದಕ್ಕೆ ಬೇಕಿರುವ ಟೈಮರ್, ರಿಲೆ, ಸರ್ಕೀಟ್ಗಳನ್ನು ಅಮೆಜಾನ್ ಮೂಲಕ ಖರೀದಿಸಿದ್ದರು. ಇತರ ಅಗತ್ಯ ವಸ್ತುಗಳನ್ನು ಶಿವಮೊಗ್ಗದ ಸ್ಥಳೀಯ ವರ್ತಕರಿಂದ ಖರೀದಿಸಿದ್ದರು.
ರಾಷ್ಟ್ರಧ್ವಜವನ್ನು ಸುಟ್ಟು, ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಕೆಮ್ಮನಗುಂಡಿಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟ ನಡೆಸಿದ್ದರು ಎಂದರು.