ಬೆಂಗಳೂರು,ಡಿ.6;
ನಾಯಕತ್ವ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಹೈಕಮಾಂಡ್ ಮದ್ದು ಅರೆದಿದ್ದು ನಾಳೆ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ.
ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಸಭೆಯಲ್ಲಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ತಂಡದ ಭಿನ್ನಮತ ಹಾಗೂ ಉಪ ಚುನಾವಣೆ ಸೋಲಿನ ಕುರಿತಂತೆ ಆತ್ಮಾವಲೋಕನ ನಡೆಯಲಿದೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವ ವಿಷಯಗಳು, ವಕ್ಫ್,ಮುಡಾ ಹಗರಣ ಆರೋಪಗಳ ಕುರಿತು ಮತ್ತೊಂದು ಹಂತದ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ನಡೆಯುತ್ತಿರುವ ಸಭೆಯಲ್ಲಿ ಎಲ್ಲಾ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು
ಮನುಷ್ಯನ ಸ್ವಭಾವದ ದೌರ್ಬಲ್ಯ ಎಲ್ಲರಿಗೂ ಇರುತ್ತದೆ. ಹೀಗಾಗಿ ಯತ್ನಾಳ್ ನನ್ನ ಹಾಗೂ ನಮ್ಮ ಪುತ್ರರನ್ನು ಟಾರ್ಗೆಟ್ ಮಾಡುತ್ತಿರಬಹುದು. ಆ ಬಗ್ಗೆ ನನಗೇನೂ ಅಭ್ಯಂತರ ಇಲ್ಲ. ಆದರೆ, ನನ್ನ ಉದ್ದೇಶ ನಾವೆಲ್ಲ ಒಟ್ಟಾಗಿ ಹೋಗಬೇಕೆಂಬುದಾಗಿದೆ ಎಂದು ತಿಳಿಸಿದರು
ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವೇ ಹೊರತು, ನಾವು ನಾವೇ ಬಡದಾಡಿಕೊಳ್ಳುವುದಲ್ಲ. ಇದು ಹೆಚ್ಚು ಶಕ್ತಿಯನ್ನು ನೀಡುವುದಿಲ್ಲ. ಅದಕ್ಕಾಗಿ ಎಲ್ಲವನ್ನೂ ಮರೆತು ಒಟ್ಟಾಗಿ ಹೋಗಬೇಕು ಎಂದರು.
ವಿಧಾನಮಂಡಲದ ಅಧಿವೇಶನವನ್ನು ಯಾವುದೇ ಗೊಂದಲವಿಲ್ಲದೆ ನಾವೆಲ್ಲ ಒಟ್ಟಾಗಿ ಎದುರಿಸುತ್ತೇವೆ. ಸರ್ಕಾರದ ಹಗರಣಗಳನ್ನು ಬಯಲು ಮಾಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ಇ.ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ಚರ್ಚೆ ಆಗಲಿದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಕೇಂದ್ರದ ನಾಯಕರು, ನಾವ್ಯಾರೂ ಅಲ್ಲ. ಅವರು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನ ಅವರ ಓಡಾಟ ಮತ್ತು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಮೊನ್ನೆಯ ಮೂರು ಜಿಲ್ಲೆಗಳ ಪ್ರವಾಸದ ವೇಳೆ ಅವರಿಗೆ ಸಿಕ್ಕ ಜನಬೆಂಬಲ ಯಾವ ರೀತಿ ಇದೆ ಎಂಬುದನ್ನು ಗಮನಿಸಿದ್ದಾರೆ ಎಂದರು
Previous ArticleIND vs AUS: ಸ್ಟಾರ್ಕ್ ಮಿಂಚಿನ ದಾಳಿ 180 ರನ್ಗಳಿಗೆ ಭಾರತ ಆಲೌಟ್
Next Article ಬೆಳಗಾವಿಗೆ ಪೊಲೀಸ್ ಸರ್ಪಗಾವಲು.