ಬೆಂಗಳೂರು,ಏ.8:
ಆರೋಗ್ಯ ಸುರಕ್ಷತಾ ವಿಭಾಗವು ರಾಜ್ಯದ ವಿವಿಧ ಕಡೆ ಕುಡಿಯುವ ನೀರಿನ ಬಾಟಲಿಗಳಲ್ಲಿನ 255 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ 95 ಮಾದರಿಗಳು ಅಸುರಕ್ಷಿತ, 88 ಮಾದರಿಗಳು ಕಳಪೆ ಗುಣಮಟ್ಟದ್ದೆಂದು ವರದಿಯಾಗಿವೆ. 72 ಮಾದರಿಗಳು ಮಾತ್ರ ಸುರಕ್ಷಿತ ಆಗಿದ್ದವು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ಥಳೀಯ ಕಂಪನಿಗಳು ತಯಾರಿಸುವ ಬಾಟಲಿಗಳಲ್ಲಿನ ನೀರು ಶೇ 99ರಷ್ಟು ಕಳಪೆ ಗುಣಮಟ್ಟದ್ದೆಂದು ಗುರುತಿಸಲಾಗಿದೆ. ಮಾದರಿ ವಿಶ್ಲೇಷಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ವಿಶ್ಲೇಷಣೆಗೆ ಒಳಪಡಿಸಿ, ಕಳಪೆ ನೀರಿನ ಬಾಟಲಿ ಪೂರೈಸುವ ಕಂಪನಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು
ಅಸುರಕ್ಷಿತ ಮತ್ತು ಕಳಪೆ ಗುಣಮಟ್ಟದ ನೀರಿನ ಬಾಟಲಿಗಳನ್ನು ಪೂರೈಸುವ ಕಂಪನಿಗಳ ಪಟ್ಟಿಯನ್ನೂ ಅವರು ಬಿಡುಗಡೆ ಮಾಡಿದರು.
ಗುಣಮಟ್ಟ ಕಳಪೆ:
‘ಮಾರ್ಚ್ ತಿಂಗಳಲ್ಲಿ 1,891 ಔಷಧ ಮಾದರಿಗಳನ್ನು ಔಷಧ ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅವುಗಳಲ್ಲಿ 41 ಔಷಧಗಳು ಕಳಪೆ ಗುಣಮಟ್ಟದ್ದೆಂದು ಪತ್ತೆಯಾಗಿವೆ. ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ಫೆಬ್ರುವರಿ ತಿಂಗಳಲ್ಲಿ 10 ಮತ್ತು ಮಾರ್ಚ್ ತಿಂಗಳಲ್ಲಿ 18 ಮೊಕದ್ದಮೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಿಸಲಾಗಿದೆ’ ಎಂದರು.
ಫೆಬ್ರುವರಿಯಲ್ಲಿ 1,872 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಲ್ಲದೆ, 2,078 ಔಷಧ ಮಳಿಗೆಗಳನ್ನು ಪರಿವೀಕ್ಷಣೆ ನಡೆಸಲಾಗಿದೆ. ಈ ಪೈಕಿ, ನಿಯಮ ಉಲ್ಲಂಘಿಸಿದ 251 ಸಂಸ್ಥೆಗಳ ಪರವಾನಗಿ ಅಮಾನತು ಮಾಡಲಾಗಿದೆ. ಅಲ್ಲದೆ, ವಿಶೇಷ ಅಭಿಯಾನ ನಡೆಸಿ ಗುಣಮಟ್ಟ ಇಲ್ಲದ 24,29,479 ಮೌಲ್ಯದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ’ ಎಂದು ತಿಳಿಸಿದರು.
ರಿಂಗರ್ ಲ್ಯಾಕ್ವೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 196 ಬ್ಯಾಚ್‌ನ ಮಾದರಿಗಳಲ್ಲಿ 113 ಕಳಪೆ ಗುಣಮಟ್ಟದ್ದೆಂದು ಘೋಷಿತವಾಗಿದ್ದು, ತಯಾರಿಕಾ ಕಂಪನಿಯಾದ ಪಶ್ಚಿಮ್ ಬಂಗಾ ಫಾರ್ಮಸೂಟಿಕಲ್ಸ್ ವಿರುದ್ಧ ಮಾರ್ಚ್ ಅಂತ್ಯದವರೆಗೆ 78 ಮೊಕದ್ದಮೆ ದಾಖಲಿಸಲಾಗಿದೆ. ಕಳಪೆ ಗುಣಮಟ್ಟದ ಔಷಧವೆಂದು ಘೋಷಿತವಾದ ಮತ್ತು ಇತರ ಉಲ್ಲಂಘನೆಗಾಗಿ ವಿವಿಧ ಕಂಪನಿಗಳ ವಿರುದ್ಧ 43 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ’ ಎಂದರು.
ಅಸುರಕ್ಷಿತ:
ಮಾರ್ಚ್ ತಿಂಗಳಲ್ಲಿ 3204 ಆಹಾರ ಪದಾರ್ಥಗಳ ಮಾದರಿಗಳನ್ನು ವಿಶ್ಲೇಷಣೆ ಒಳಪಡಿಸಲಾಗಿದೆ. ವಿಶ್ಲೇಷಣೆಗೆ ಒಳಪಡಿಸಲಾದ ತುಪ್ಪದ ಎಲ್ಲ ಆರು ಮಾದರಿಗಳು ಸುರಕ್ಷಿತ ಎಂದು ವರದಿಯಾಗಿವೆ’ ಎಂದು ಹೇಳಿದರು.
ಖೋವಾದ ಒಂಬತ್ತು ಮಾದರಿಗಳಲ್ಲಿ ಮೂರು ಕಳಪೆ ಗುಣಮಟ್ಟ ಆರು ಸುರಕ್ಷಿತ ಪನ್ನೀರ್‌ಗಳ 32 ಮಾದರಿಗಳಲ್ಲಿ ಎರಡು ಅಸುರಕ್ಷಿತ ಉಳಿದ 30 ಸುರಕ್ಷಿತ ಸಿಹಿತಿಂಡಿಗಳ 83 ಮಾದರಿಗಳಲ್ಲಿ ಎರಡು ಅಸುರಕ್ಷಿತ ಖಾರ ಮಿಕ್ಸರ್‌ಗಳ 27 ಮಾದರಿಗಳಲ್ಲಿ ನಾಲ್ಕು ಅಸುರಕ್ಷಿತ ಎಂದು ವರದಿಯಾಗಿವೆ’ ಎಂದು ಅವರು ವಿವರಿಸಿದರು.
‘ಸ್ಥಳೀಯವಾಗಿ ತಯಾರಿಸುವ ಜ್ಯೂಸ್ ಪಾನೀಯಗಳ 46 ಐಸ್ ಕ್ಯಾಂಡಿಗಳ 39 ಐಸ್ ಕ್ರೀಂಗಳ 107 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಆ ವರದಿ ಇನ್ನೂ ಬಂದಿಲ್ಲ. ಆಹಾರ ಪದಾರ್ಥಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ 92 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಆರು ಘಟಕಗಳಿಗೆ 38 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ 590 ಹೋಟೆಲ್ ರೆಸ್ಟೋರೆಂಟ್‌ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 214ಕ್ಕೆ ನೋಟಿಸ್ ನೀಡಲಾಗಿದೆ. 11 ಹೋಟೆಲ್ ರೆಸ್ಟೋರೆಂಟ್‌ಗಳಿಗೆ ಒಟ್ಟು 1.15 ಲಕ್ಷ ದಂಡ ವಿಧಿಸಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶ ಆಧರಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.