ಬೆಂಗಳೂರು,ಏ.12- ಮೂವತ್ತು ಅಡಿ ಆಳದ ಬಾವಿಗೆ ಬಿದ್ದು ನರಳಾಡುತ್ತಿದ್ದ ಎರಡು ಕಾಡಾನೆಗಳನ್ನು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ತಮಿಳುನಾಡು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ ಕುಂಡಲಂ ಗ್ರಾಮದ ಬಳಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಜವಳಗೆರೆ ಕಾಡಿನಿಂದ ಆಹಾರ ಹರಿಸಿ ರೈತರ ಜಮೀನುಗಳಿಗೆ ನುಗ್ಗಿದ್ದವು. ಸಂಜೆಯಾದರೂ ಕಾಡಿನತ್ತ ಮುಖ ಮಾಡದೇ ಅಲ್ಲಿಯೇ ಉಳಿದಿದ್ದ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಪಟಾಕಿ ಸಿಡಿಸಿದ್ದರಿಂದ ರೈತರ ತೋಟಗಳಿಗೆ ನುಗ್ಗಿದ್ದವು.ಈ ವೇಳೆ ಆಯತಪ್ಪಿ ಮರಿ ಆನೆ ಹಾಗೂ ಸಲಗ 30 ಅಡಿ ಆಳದ ಬಾವಿಗೆ ಬಿದ್ದಿದ್ದವು.
ಉಳಿದ ಕಾಡಾನೆಗಳು ಕಾಡಿನತ್ತ ಹೊರಟು ಹೋದರೆ ಮರಿ ಆನೆಗಾಗಿ ಬಾವಿ ಬಳಿಯೇ ತಾಯಿ ಆನೆ ರೋಧಿಸುತ್ತಾ ನಿಂತ್ತಿತ್ತು. ಕಾಡಾನೆಯ ರೋಧನೆಯನ್ನು ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಬಾವಿ ಬಳಿ ತೆರಳಿದ್ದು, ಬಾವಿಯಿಂದ ಹೊರಬರಲು ಹರಸಾಹಸಪಡುತ್ತಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಎರಡು ಜೆಸಿಬಿಗಳ ಮೂಲಕ ತಡರಾತ್ರಿಯವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ತಾಯಿ ಆನೆಯ ಅಡಚಣೆ ನಡುವೆಯೂ ದಾರಿ ಮಾಡಿ ಬಾವಿಯಿಂದ ಸಲಗ ಮತ್ತು ಮರಿ ಆನೆಗೆ ಹೊರಬರಲು ವ್ಯವಸ್ಥೆ ಮಾಡಿದ್ದಾರೆ. ಸಲಗದ ಜೊತೆ ಮರಿ ಆನೆ ಹೊರಬರುತ್ತಿದ್ದಂತೆ ತಾಯಿ ಆನೆ ಮರಿಯನ್ನು ಕಾಡಿನತ್ತ ಕರೆದೊಯ್ದಿದ್ದು, ಅರಣ್ಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.