ಬೆಂಗಳೂರು ,ಮೇ.29:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಸರಣಿ ಕೊಲೆಗಳು, ಕೋಮು ಸಂಬಂಧಿ ಹಿಂಸೆಯ ಘಟನೆಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಎಲ್ಲರ ಜೊತೆ ಮಾತನಾಡಿ ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ವಸತಿ ಮಂತ್ರಿ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಬಿಕೆ ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಮಂಗಳೂರು ಹೊರವಲಯದ ಕಡುಪುವಿನಲ್ಲಿ ಏಪ್ರಿಲ್ 27ರಂದು ನಡೆದ ಕೇರಳದ ವಯನಾಡಿನ ಅಶ್ರಫ್ ಗುಂಪುಹತ್ಯೆ ನಡೆದು ಸರಿಯಾಗಿ ಒಂದು ತಿಂಗಳು ಮುಗಿಯುವಷ್ಟರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೋಮುದ್ವೇಷಕ್ಕೆ ಬಲಿಯಾಗಿದ್ದಾರೆ.
ಹಲವರು ವಿನಾಕಾರಣ ಹಲ್ಲೆಗೆ ಒಳಗಾಗಿದ್ದಾರೆ. ಜಿಲ್ಲೆಯ ಮತಾಂಧ ಗುಂಪುಗಳು ಒಡಲೊಳಗೆ ಬಚ್ಚಿಟ್ಟುಕೊಂಡ ಕೋಮು ದ್ವೇಷ ಜಿಲ್ಲೆಯ ಜನರನ್ನು ಆತಂಕದ ಮಡುವಿಗೆ ದೂಡಿದೆ ಎಂದು ಹೇಳಿ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಕಾಂಗ್ರೆಸ್ ಪಕ್ಷ ದೊರೆಯುವ ಬೆದರಿಕೆ ಹಾಕಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಕ್ಕಟ್ಟು ಬಗೆಹರಿಸುವಂತೆ ಹರಿಪ್ರಸಾದ್ ಅವರಲ್ಲಿ ಮನವಿ ಮಾಡಿದ್ದಾರೆ. ಹರಿಪ್ರಸಾದ್ ಅವರು ಮೂಲಕ ಕರಾವಳಿಯವರು. ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದು ಸಾಕಷ್ಟು ಹಿಡಿತ ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಬಗೆಹರಿಸುವ ಜವಾಬ್ದಾರಿಯನ್ನು ಅವರಿಗೆ ನೀಡಿದ್ದಾರೆ ಈ ಮಾತುಕತೆಯ ಸಮಯದಲ್ಲಿ ಹರಿಪ್ರಸಾದ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಅವರ ಬದಲಾವಣೆಗೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಹಿಂಸಾಚಾರಕ್ಕೆ ತಕ್ಷಣ ಕಡಿವಾಣ ಹಾಕಲು ಹಾಗು ಅಲ್ಲಿನ ಪೊಲೀಸ್ ವ್ಯವಸ್ಥೆಗೆ ಕಾಯಕಲ್ಪ ನೀಡಲು ಏನು ಮಾಡಬಹುದು ಎಂಬ ಬಗ್ಗೆ ಮುಖ್ಯಮಂತ್ರಿಗಳು ಬಿ ಕೆ ಹರಿಪ್ರಸಾದ್ ಅವರ ಸಲಹೆ ಪಡೆದಿದ್ದಾರೆ . ತಕ್ಷಣದ ಕ್ರಮವಾಗಿ ಜಿಲ್ಲೆಯ ಎಸ್ಪಿ ಹಾಗು ಮಂಗಳೂರಿನ ಪೊಲೀಸ್ ಕಮಿಷನರ್ ಇಬ್ಬರನ್ನೂ ತಕ್ಷಣ ಬದಲಾಯಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಎಂದು ತಿಳಿದು ಬಂದಿದೆ.
ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ಅವರು ಕರಾವಳಿ ಜಿಲ್ಲೆಯವರು, ಅಲ್ಲಿನ ರಾಜಕೀಯ ಮತ್ತು ಸಾಮಾಜಿಕ ಸೂಕ್ಷ್ಮತೆಗಳನ್ನು ಅರಿತವರು. ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಕೋಮು ವೈಷಮ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂದು ಅವರ ಜೊತೆ ಉಪಹಾರ ಸೇವಿಸಿ ಕೆಲವು ಸಾಮಾನ್ಯ ವಿಷಯಗಳ ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ದ್ವೇಷ ತೊಡೆದುಹಾಕಿ ಸೌಹಾರ್ದತೆ ನೆಲೆಗೊಳಿಸುವ ಕುರಿತು ಚರ್ಚಿಸಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.
ಬಿಕೆ ಹರಿಪ್ರಸಾದ್ ಗೆ ಸಿಎಂ ಕೊಟ್ಟ ಜವಾಬ್ದಾರಿ ಏನು ಗೊತ್ತಾ ?
Previous Articleಕೋಮು ಸಂಘರ್ಷ ತಡೆ ಕಾರ್ಯಪಡೆ ರಚನೆ.
Next Article ವಿಧಾನ ಪರಿಷತ್ ಸದಸ್ಯರಿಗೆ ಬಿಸಿ ಮುಟ್ಟಿಸಿದ ಹೈಕಮಾಂಡ್.
