ಬೆಂಗಳೂರು,ಜ.24:
ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ವಿಜಯೇಂದ್ರ ಕಸರತ್ತು ನಡೆಸಿರುವ ಬೆನ್ನಲ್ಲೇ ಅವರ ಪದಚ್ಯುತಿಗಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯತ್ನಗಳು ನಡೆದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಣದ ನಾಯಕರು ಕಳೆದ ರಾತ್ರಿ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿ, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷರಾಗಿ ಮುಂದುವರೆಸಬಾರದು ಎಂದು ವರಿಷ್ಠರನ್ನು ಆಗ್ರಹಿಸಲು ತೀರ್ಮಾನಿಸಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನದ ಆಯ್ಕೆಗೆ ಚುನಾವಣೆ ನಡೆಯಬೇಕು. ಅದಕ್ಕೂ ಮುನ್ನ ಈಗಾಗಲೇ ಘೋಷಣೆಯಾಗಿರುವ ಎಲ್ಲ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಿ ಹೈಕಮಾಂಡ್ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕು ಎಂದು ಆಗ್ರಹಿಸಲು ನಿರ್ಧರಿಸಿದ್ದಾರೆ ಇದಕ್ಕಾಗಿ ಸದ್ಯದಲ್ಲೇ ನಿಯೋಗದಲ್ಲಿ ದೆಹಲಿಗೆ ತೆರಳಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಮತ್ತೊಂದಡೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಸಕರು ಮತ್ತು ಪ್ರಮುಖ ನಾಯಕರು ಸಭೆ ಸೇರಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಈ ಬಾರಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರಿಗೆ ನೀಡಬೇಕು ಎಂಬ ಮನವಿಯನ್ನು ಹೈಕಮಾಂಡ್ ಗೆ ಸಲ್ಲಿಸಲು ನಿರ್ಧರಿಸಿದ್ದಾರೆ.
ಇದರ ನಡುವೆ ಹೈಕಮಾಂಡ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮತೋಲನದಿಂದ ಪಕ್ಷ ಸಂಘಟಿಸುವ ವ್ಯಕ್ತಿಯನ್ನು ರಾಜ್ಯ ಅಧ್ಯಕ್ಷರನ್ನಾಗಿ ಇನ್ನೇನಿಸಲು ತೀರ್ಮಾನಿಸಿದ್ದು ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬ ವರದಿಗಳು ಹರಡಿವೆ.
ಈ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ತಾವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ.ಅದಕ್ಕಾಗಿ ಯಾವುದೇ ಲಾಭಿ ನಡೆಸುತ್ತಿಲ್ಲ. ಇದರ ಬದಲಾಗಿ ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದು ಹೇಳಿದರು
ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಶಕ್ತಿಯಿದೆ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ. ಎಲ್ಲರೂ ಸೇರಿ ಮಾಡಿದಾಗ ಶಕ್ತಿ ಬರುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವ ಪಕ್ಷ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಇಂತಹ ಸಮಯದಲ್ಲಿ ಸೌಹಾರ್ದತೆಯಿಂದ ಪಕ್ಷದ ಹಿರಿಯರು ಮಾರ್ಗದರ್ಶನ ಮಾಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಮೇಲಿಂದ ಶಿವರಾಜ ಸಿಂಗ್ ಚೌಹಾಣ್ ಬರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಹೇಳಿದರು.
ರಾಜ್ಯ ಬಿಜೆಪಿಯ ಭಿನ್ನಮತ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ಮನಸ್ತಾಪ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ. ನಾವೆಲ್ಲರೂ ಕೂಡಿ ಮತ್ತೆ ಬಿಜೆಪಿ ಕಟ್ಟುವಲ್ಲಿ ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದೆ. ನಮ್ಮಲ್ಲಿರುವ ಜಗಳ ಅಣ್ಣ-ತಮ್ಮರ ಜಗಳ. ಹಿರಿಯರು ಕೂತು ಬಗೆಹರಿಸುವ ವಿಶ್ವಾಸ ಇದೆ. ಮುಂಬರುವ ಚುನಾವಣೆ ಪ್ರಕ್ರಿಯೆ ಪೂರ್ವದಲ್ಲಿ ಎಲ್ಲವನ್ನೂ ಬಗೆಹರಿಸುವ ಪ್ರಯತ್ನ ಆಗುತ್ತಿವೆ. ಅಧ್ಯಕ್ಷರ ಚುನಾವಣೆ ಸುಗಮವಾಗಿ ಜರಗುತ್ತದೆ. ಚುನಾವಣೆಯ ನಂತರ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
Previous Articleಜೆಡಿಎಸ್ ಶಾಸಕರು ಪಕ್ಷ ಬಿಡೋದು ನಿಜಾನಾ !
Next Article ಸೋಲಾರ್ ವಿದ್ಯುತ್ ಗೆ ಉತ್ತೇಜನ.