ಬೆಂಗಳೂರು : ಬದಲಾದ ರಾಜಕೀಯ ಪರಿಸ್ಥಿಯಲ್ಲಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಅಷ್ಟೇ ಅನಿರೀಕ್ಷಿತವಾಗಿ ಮಾಜಿಯಾಗುವ ಹಾದಿಯಲ್ಲಿದ್ದಾರಾ?… ಹೌದು ಎನ್ನುತ್ತವೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು..
ಆರು ತಿಂಗಳ ಅಧಿಕಾರದ ಅವಧಿ ಪೂರ್ಣಗೊಳಿಸಿ ಮತ್ತೆ ತಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸಂಪುಟ ಪುನಾರಚನೆ ಸೇರಿದಂತೆ ಹಲವು ಬದಲಾವಣೆಗಳ ನೀಲನಕ್ಷೆಯೊಂದಿಗೆ ಸಿದ್ಧರಾಗಿದ್ದ ಬೊಮ್ಮಾಯಿ ಅವರಿಗೆ ಅಮಿತ್ ಶಾ ಹೈಕಮಾಂಡ್ ನಿರ್ಧಾರದ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದು, ಬೊಮ್ಮಾಯಿ ಅವರ ಕಾರ್ಯಯೋಜನೆ ಮೂಲೆಗುಂಪಾಗಿದೆ.
ಪೂರ್ವ ನಿಗದಿತ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಸಿಎಂ ಬೊಮ್ಮಾಯಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಹೈಕಮಾಂಡ್ನ ನಿರ್ಧಾರವನ್ನು ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯಾದಾಗ ಬೊಮ್ಮಾಯಿ ಅವರಿಗೆ ಜನಸಾಮಾನ್ಯರ ಸಿಎಂ ಎಂಬ ಇಮೇಜ್ ಸಿಕ್ಕಿತ್ತು.
ಇದು ಹೈಕಮಾಂಡ್ ಮೆಚ್ಚುಗೆಗೊ ಪಾತ್ರವಾಗಿತ್ತು. ಹೀಗಾಗಿ ವರಿಷ್ಠರು ತಮಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿ ಇದನ್ನು ಸದುಪಯೋಗ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಮತ್ತೆ ತಮ್ಮ ನಾಯಕತ್ವದಲ್ಲೇ ಚುನಾವಣೆ ಎದುರಿಸುವ ಘೋಷಣೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಯಾಗಿ ತಾವು ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ವಿಫಲವಾಗಿದ್ದೀರಿ. ಸರ್ಕಾರಕ್ಕೆ
ತನ್ನದೇ ಆದ ವರ್ಚಸ್ಸು ಇಲ್ಲ. ಸರ್ಕಾರದ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲಿಲ್ಲ.
ಮಂತ್ರಿಗಳ ಕಾರ್ಯವೈಖರಿ ಬದಲಾಗಲಿಲ್ಲ. ಮುಖ್ಯಮಂತ್ರಿ ಬದಲಾದರು ಎನ್ನುವುದನ್ನು ಬಿಟ್ಟರೆ ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಇದು ಹೈಕಮಾಂಡ್ನ ಚಿಂತೆಗೆ ಕಾರಣವಾಗಿದೆ. ಈ ಹಿಂದೆ ತಮಗೆ ಹಲವಾರು ಬಾರಿ ಈ ಬಗ್ಗೆ ಸ್ಪಷ್ಟ
ಸಂದೇಶ ನೀಡಿದರೂ ನೀವು ಅದನ್ನು ಪಾಲಿಸಲಿಲ್ಲ. ಹೀಗಾಗಿ ಬದಲಾವಣೆ ಅನಿವಾರ್ಯವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ನ ನಿರ್ಧಾರವನ್ನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಬೊಮ್ಮಾಯಿ ತಮ್ಮ ಮೇಲೆ ವಿಶ್ವಾಸವಿಟ್ಟು ಉನ್ನತ ಹುದ್ದೆ ಕಲ್ಪಿಸಿದ್ದಕ್ಕಾಗಿ ನಾನು ಅಭಾರಿಯಾಗಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರಲು ಎಲ್ಲಾ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಅಮಿತ್ ಶಾ ನವದೆಹಲಿಗೆ ತೆರಳಿದ್ದು, ಮುಂದಿನ ವಾರ ಪಕ್ಷದ ರಾಷ್ಟ್ರೀಯ ಕೋರ್ ಕಮಿಟಿ ಸಭೆ ನಡೆಯಲಿದೆ. ಇದರಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಬಸವರಾಜ ಬೊಮ್ಮಾಯಿ ಅವರ ಬದಲಿಗೆ ಉತ್ತರ ಕರ್ನಾಟಕಕ್ಕೆ ಸೇರಿದ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಹೈಕಮಾಂಡ್ ಸಿದ್ಧತೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೆಸರು ಪ್ರಧಾನವಾಗಿ ಕೇಳಿ ಬರುತ್ತಿದೆ. ಇವರೊಂದಿಗೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ, ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರು ಕೇಳಿಬರುತ್ತಿದೆ.
ಅದೇ ರೀತಿ ಪಕ್ಷದ ಅಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದ್ದು, ಇವರ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಪರಿಗಣನೆಯಲ್ಲಿದೆಯಾದರೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಈ ಹುದ್ದೆಗೆ ಲಾಬಿ ನಡೆಸಿದ್ದು, ವಿದ್ಯಮಾನಗಳು ಕುತೂಹಲ ಮೂಡಿಸಿವೆ.