ಬೆಂಗಳೂರು,ಆ.22:
ನಿವೇಶನ ಹಂಚಿಕೆ ಅಕ್ರಮ ಆರೋಪ ಕುರಿತು ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರು ಮಾಡಿರುವ ತಪ್ಪುಗಳನ್ನು ಪ್ರಶ್ನಿಸಿದರೆ ಬಿಜೆಪಿ ಅದನ್ನು ಮರೆಮಾಚಿ ತಮ್ಮನ್ನು ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ
ರಾಜ್ಯಾದ್ಯಂತ ಬಿಜೆಪಿ ನಡೆಸಿರುವ ಪ್ರತಿಭಟನೆಗೆ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯಪಾಲರು ಮಾಡಿರುವ ತಪ್ಪುಗಳನ್ನು ಪ್ರಶ್ನಿಸಿದ ತಮ್ಮನ್ನು ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ನಾಯಕರ ಕ್ರಮ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದಾರೆ.
ಹಿಂದೂಗಳಲ್ಲಿ ಜಾತಿಯೇ ಇಲ್ಲ ಧರ್ಮವೇ ಎಲ್ಲಾ ಎಂಬ ತತ್ವದ ಬಿಜೆಪಿ ನಾಯಕರಿಗೆ ತಮ್ಮ ಬುಡಕ್ಕೆ ಬೆಂಕಿ ಅಂಟಿಕೊಂಡಾಗ ಜಾತಿಯ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿರುವ ಅವರು ಪರಿಶಿಷ್ಟ ಸಮುದಾಯಕ್ಕೆ ಸೇರಿದ ಗೆಹಲೋಟ್ ಅವರನ್ನು ಕೇಂದ್ರ ಸಂಪುಟದಿಂದ ತೆಗೆದದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದ ಅವರನ್ನು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಮಂತ್ರಿಮಂಡಲದಿಂದ ತೆಗೆದು ರಾಜ್ಯಪಾಲರಾಗಿ ನೇಮಿಸುವ ಮೂಲಕ ಪಂಜರದ ಗಿಳಿಯನ್ನಾಗಿ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.
ಮಾರ್ಗದರ್ಶಕ ಮಂಡಲ ಸೇರುವ ವಯಸ್ಸಾಗದೆ ಹೋದರೂ ಗೆಹಲೋಟ್ ಅವರನ್ನು ಸಂಪುಟದಿಂದ ಕೈ ಬಿಟ್ಟು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಇವರನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ಆತ್ಮಸಾಕ್ಷಿ ಚುಚ್ಚಲಿಲ್ಲವೇ ಎಂದಿದ್ದಾರೆ.
ದಲಿತ ಸಮುದಾಯವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಬಿಜೆಪಿ ನಾಯಕರ ಬಗ್ಗೆ ಈ ಸಮುದಾಯ ಸಾಕಷ್ಟು ಎಚ್ಚರ ಹೊಂದಿದೆ. ಬಂಗಾರು ಲಕ್ಷ್ಮಣ್ ಅವರನ್ನು ಯಾವ ರೀತಿ ನಡೆದುಕೊಂಡಿರಿ ಎಂಬುದು ಈ ಎಲ್ಲರಿಗೂ ಗೊತ್ತಿದೆ ಕಾಂಗ್ರೆಸ್ ಪಕ್ಷ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.
Previous Articleಲೋಕಾಯುಕ್ತ ತನಿಖೆ ಎದುರಿಸಿದ ಶಿವಕುಮಾರ್.
Next Article ಬೀದಿಗಿಳಿದ ಬಿಜೆಪಿ ನಾಯಕರು.