ಬೆಂಗಳೂರು,ಸೆ.1-
ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಇದೀಗ ಧರ್ಮ ಸಂಘರ್ಷ ಯಾತ್ರೆ ಆರಂಭಿಸಿದೆ ಅಸಹಜ ಸಾವು ಆರೋಪ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳದಲ್ಲಿ ಧರ್ಮ ಯಾತ್ರೆ ನಡೆಸಿದ ಬಿಜೆಪಿ ಮೈಸೂರಿನ ಚಾಮುಂಡಿ ಬೆಟ್ಟದತ್ತ ಗಮನ ಹರಿಸಿದೆ.
ವಿಶ್ವಪ್ರಸಿದ್ಧ ನಾಡಹಬ್ಬ ದಸರಾ ಉದ್ಘಾಟನೆಗೆ ಬುಕ್ಕರು ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಯಾರ ಆಸ್ತಿಯೂ ಅಲ್ಲ ಅದು ಸರ್ಕಾರದ ಆಸ್ತಿ ಎಂದು ಹೇಳಿದ್ದರು.
ಈ ಹೇಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಚಾಮುಂಡಿ ಬೆಟ್ಟ ಹಿಂದುಗಳ ಆಸ್ತಿ ಚಾಮುಂಡಿ ದೇವಿಯ ನೆಲೆವೀಡು ಹಿಂದೂಗಳ ಧಾರ್ಮಿಕ ಕ್ಷೇತ್ರ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.
ಇದೀಗ ಶಿವಕುಮಾರ್ ಅವರ ಈ ಹೇಳಿಕೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಿರುವ ಬಿಜೆಪಿ ಮೈಸೂರಿನಿಂದ ಚಾಮುಂಡಿ ಬೆಟ್ಟದವರೆಗೆ ನಡಿಗೆ ಜಾಥಾಕ್ಕೆ ಚಿಂತನೆ ನಡೆಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಚಾಮುಂಡಿ ಚಲೋಗೆ ಸಧ್ಯದಲ್ಲೇ ಮುಹೂರ್ತ ಫಿಕ್ಸ್ ಮಾಡಲಾಗುತ್ತದೆ. ಚಾಮುಂಡಿ ಚಲೋ ಮೂಲಕ ಮತ್ತೊಂದು ಹಿಂದುತ್ವ ಅಸ್ತ್ರ ಪ್ರಯೋಗ ಮಾಡಲಿದೆ. ಧರ್ಮಸ್ಥಳ ಹೋರಾಟ ಜತೆ ಜತೆಗೇ ಚಾಮುಂಡಿ ಹೋರಾಟ ಕೈಗೊಂಡು ಸರ್ಕಾರಕ್ಕೆ ಎದಿರೇಟು ಕೊಡಲು ಪಣ ತೊಟ್ಟಿದೆ.
ಮೊನ್ನೆಯಷ್ಟೇ ಮೈಸೂರಿಗೆ ಹೋಗಿದ್ದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಪಾದಯಾತ್ರೆ ಎಲ್ಲಿಂದ ಆರಂಭವಾಗಬೇಕು ಇದರ ಮುಖ್ಯ ಘೋಷಣೆ ಏನಾಗಬೇಕು ಎಂದು ಪೂರ್ವಭಾವಿ ಸಮಾಲೋಚನೆ ನಡೆಸಿದ್ದಾರೆ.
ಇದೀಗ ಧರ್ಮಸ್ಥಳ ಯಾತ್ರೆ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಚಾಮುಂಡಿ ಯಾತ್ರೆ ಕೂಡ ಆರಂಭವಾಗಲಿದೆ.
Previous Articleಗಣೇಶ ಮೂರ್ತಿ ವಿಸರ್ಜನೆ ವೇಳೆ ಯಾಕೆ ಹೀಗಾಗುತ್ತಿದೆ !
Next Article ಇವರಿಗೆಲ್ಲಾ ಅನ್ನಭಾಗ್ಯದ ಅಕ್ಕಿ ಸಿಗುವುದಿಲ್ಲ !