ಬೆಂಗಳೂರು,ಜೂ.28:
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಇದೀಗ ಸಂಘ ಪರಿವಾರ ಮಧ್ಯಪ್ರವೇಶಿಸಿದೆ.
ಆರ್ ಎಸ್ ಎಸ್ ನಾಯಕರ ಸಲಹೆ ಮೇರೆಗೆ ಕಾರ್ಯಾಚರಣೆ ನಡೆಸಿದ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಮೊದಲ ಹಂತದಲ್ಲಿ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯಲು ಆರ್ ಎಸ್ ಎಸ್ ನಾಯಕರು ಹಸಿರು ನಿಶಾನೆ ತೋರಿದ್ದಾರೆ. ಇದರ ಜೊತೆಗೆ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ಸಮಗ್ರ ಬದಲಾವಣೆಗೂ ಸಲಹೆ ಮಾಡಿದ್ದಾರೆ ಪರಿವಾರದ ನಾಯಕರ ಸಲಹೆ ಮೇರೆಗೆ ತಟಸ್ಥ ಮತ್ತು ಭಿನ್ನರ ಬಣ ಇದೀಗ ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ಮುಂದುವರೆಸಲು ಸಹಮತ ವ್ಯಕ್ತಪಡಿಸಿದ್ದಾರೆ.
ಪಕ್ಷದ ಅಧ್ಯಕ್ಷರ ನೇಮಕಾತಿ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಲು ಮಧ್ಯ ಪ್ರವೇಶಿಸಿದ ಸಂಗ ಪರಿವಾರ ನಾಯಕರು ನಿನ್ನೆ ಬೆಳಗ್ಗೆ ಕೇಶವ ಶಿಲ್ಪಾದಲ್ಲಿ ಸಭೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಇದಾದ ನಂತರ ಬಿಕ್ಕಟ್ಟು ಬಗೆಹರಿಸಲು ನಿಯೋಜನೆಗೊಂಡಿರುವ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರು ಮಾಜಿ ಮಂತ್ರಿ ಅಶ್ವಥ್ ನಾರಾಯಣ ಅವರ ನಿವಾಸ ಮತ್ತು ಪಕ್ಷದ ಕಚೇರಿಯಲ್ಲಿ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿ ಭಿನ್ನರು ಮತ್ತು ತಟಸ್ಥರಲ್ಲಿ ಉಂಟಾಗಿದ್ದ ಎಲ್ಲ ಗೊಂದಲಗಳನ್ನು ಬಗೆಹರಿಸುವಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ.
ಅಶ್ವಥ್ ನಾರಾಯಣ ಅವರ ನಿವಾಸದಲ್ಲಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಮತ್ತು ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರನ್ನು ಮುಖಾಮುಖಿಯಾಗಿಸುವಲ್ಲಿ ಯಶಸ್ವಿಯಾದ ಪ್ರಹ್ಲಾದ ಜೋಶಿ ಇಬ್ಬರ ನಡುವೆ ಉಂಟಾಗಿದ್ದ ಭಿನ್ನಮತಕ್ಕೆ ಕಾರಣವಾದ ಅಂಶಗಳನ್ನು ಬಗೆಹರಿಸಿದ್ದಾರೆ.ವಿಜಯೇಂದ್ರ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ. ಏಕ ಪಕ್ಷಿಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಯಾವ ನಿರ್ಧಾರ ಎಲ್ಲಿಗೆ ಸೂಕ್ತ ಎಂಬ ವಿವೇಚನೆ ಇಲ್ಲದೆ ವರ್ತಿಸುತ್ತಿದ್ದಾರೆ ಇದರಿಂದ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುತ್ತಿದೆ ಎಂದು ಅರವಿಂದ ಲಿಂಬಾವಳಿ ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ಅವರನ್ನು ಕೆಲವೇ ಕೆಲವು ಮಂದಿ ಯುವಕರು ಸುತ್ತುವರೆದಿದ್ದಾರೆ ಅವರಿಗೆ ಪಕ್ಷ ಸಂಘಟನೆ ಮತ್ತು ರಾಜಕೀಯ ತಂತ್ರಗಾರಿಕೆಯ ಬಗ್ಗೆ ಯಾವುದೇ ಮಾಹಿತಿ ಮತ್ತು ಅರಿವಿಲ್ಲ ಇಂತಹವರ ಜೊತೆಗೆ ಸೇರಿ ಕಾರ್ಯಕ್ರಮ ರೂಪಿಸುತ್ತಿರುವ ಪರಿಣಾಮ ಹಿರಿಯ ನಾಯಕರು ದೂರ ಉಳಿಯುವ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು ಎನ್ನಲಾಗಿದೆ.
ಈ ಇಬ್ಬರ ನಡುವೆ ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸದಾನಂದ ಗೌಡ ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಹಲವು ಮುಖಂಡರು ಸಭೆಗೆ ಆಗಮಿಸಿದ್ದಾರೆ ಎಲ್ಲರೂ ಕೂಡ ವಿಜಯೇಂದ್ರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಸಮಾಧಾನ ಚಿತ್ತದಿಂದ ಆಲಿಸಿದ ವಿಜಯೇಂದ್ರ ತಾವೆಲ್ಲರೂ ಹಿರಿಯರಿದ್ದೀರಿ ಪಕ್ಷ ಸಂಘಟನೆ ಮತ್ತು ರಾಜಕೀಯದ ಬಗ್ಗೆ ಅಪಾರ ಅನುಭವ ಹೊಂದಿದ್ದೀರಿ ನನಗೆ ಇವುಗಳ ಕೊರತೆ ಇದ್ದು ಗೊಂದಲಗಳು ಉಂಟಾಗಿದೆ ಇನ್ನು ಮುಂದೆ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇನೆ ನಿಮ್ಮ ಸಲಹೆಯೊಂದಿಗೆ ಮುಂದುವರೆಯುತ್ತೇನೆ ನನಗೆ ಸಹಕಾರ ಕೊಡಿ ಎಂದು ಮನವಿ ಮಾಡಿದ್ದಾರೆ.
ಆಗಿಂದ್ದಾಗ್ಗೆ ಎಲ್ಲ ಹಿರಿಯರನ್ನು ಭೇಟಿ ಮಾಡಿ ಅಭಿಪ್ರಾಯ ಕೇಳುತ್ತೇನೆ ನಿಮ್ಮ ಸಲಹೆಯಂತೆ ಪಕ್ಷ ಕಟ್ಟಲು ಶ್ರಮಿಸುತ್ತೇನೆ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಪ್ರಹಲ್ಲಾದ ಜೋಶಿ ಇನ್ನು ಮುಂದೆ ಅಸಮಾಧಾನ ಬಿಕ್ಕಟ್ಟು ಎಲ್ಲವನ್ನು ಬದಿಗೊತ್ತಿ ಪಕ್ಷ ಸಂಘಟನೆಗೆ ಎಲ್ಲರೂ ಶ್ರಮಿಸಬೇಕು ಹೈಕಮಾಂಡ್ ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ರಚನೆ ಮಾಡಲಿದೆ ಇವುಗಳು ಕಾಲದಿಂದ ಕಾಲಕ್ಕೆ ಸಭೆ ಸೇರಿ ಸಂಘಟನಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ ಇದಾದ ನಂತರ ಪಕ್ಷದ ಕಚೇರಿಯಲ್ಲಿ ಮಾಜಿ ಸಂಸದ ಜಿಎಂ ಸಿದ್ದೇಶ್ ಮತ್ತು ಶಾಸಕ ಬಿಪಿ ಹರೀಶ್ ಅವರೊಂದಿಗೆ ಮಾತುಕತೆ ನಡೆಸಿದ್ದು ಅವರು ಕೂಡ ನೂತನ ಸೂತ್ರದಂತೆ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ
Previous Articleಹುಲಿಗೆ ವಿಷವಿಕ್ಕಿದ್ದು ಯಾಕೆ ಗೊತ್ತಾ ?
Next Article ದೀಪಕ್ ತಿಮ್ಮಯ ಅವರಿಗೆ ಕೆಂಪೇಗೌಡ ಪ್ರಶಸ್ತಿ