ಬೆಂಗಳೂರು,ಮಾ.2-
ರಾಜ್ಯದಲ್ಲಿ ಬಿರು ಬಿಸಿಲಿನ ಧಗೆ ದಿನೇ ದಿನೇ ಹೆಚ್ಚಳವಾಗುತ್ತಿದೆ,ಇನ್ನೂ ಮೂರು ತಿಂಗಳುಗಳ ಕಾಲ ತಾಪಮಾನ ಇನ್ನೂ ಹೆಚ್ಚಾಗಲಿದ್ದು, ಕೆಲವು ಕಡೆ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಉತ್ತರ ಕರ್ನಾಟಕ,ಕರಾವಳಿ ಭಾಗದಲ್ಲಿ ತಾಪಮಾನ ಕಂಗೆಡುವಂತೆ ಮಾಡಲಿದ್ದು ವ್ಯಾಪಕ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.
ರಾಜ್ಯದಲ್ಲಿ ಕಳೆದ ಫೆಬ್ರವರಿ ಮಧ್ಯಭಾಗದಲ್ಲಿಯೇ ಆರಂಭಗೊಂಡಿರುವ ಬೇಸಿಗೆಯು ಮೇ ಅಂತ್ಯದವರೆಗೂ ಇರಲಿದ್ದು, ಈ ವರ್ಷ ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಲಿದೆ.
ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿ.ಸೆ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗರಿಷ್ಠ ತಾಪಮಾನ 42 ಡಿ.ಸೆ ನಿಂದ 45 ಡಿ.ಸೆ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಒಂದೆರೆಡು ಡಿ.ಸೆ ಅಧಿಕ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಬಿಸಿ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಬರುವ ಏಪ್ರಿಲ್ – ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಲಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಅಧಿಕವಾಗಿದೆ. ಕೆಲವು ಬಾರಿ ಮಳೆ ಕೂಡ ಬರಲಿದ್ದು, ಇದು ತಾಪಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಫೆಬ್ರವರಿಯಲ್ಲಿ ಬಿಸಿ ಗಾಳಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಈ ವರ್ಷ ರಾಜ್ಯದ ಕರಾವಳಿಯಲ್ಲಿ ಬಿಸಿ ಗಾಳಿ ಕಾಣಿಸಿಕೊಂಡಿದೆ. ಇದು ಬಿಸಿಲಿನ ತೀವ್ರತೆಯನ್ನು ತೋರಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
Previous Articleಕಿಡ್ನಾಪ್ ಮಾಡಿಸಿದ ಸತೀಶ್ ಜಾರಕಿಹೊಳಿ ಆಪ್ತೆ.
Next Article ಕಳ್ಳತನ ಮಾಡಿದ್ರಾ ಐಪಿಎಸ್ ರೂಪಾ ಮೌದ್ಗೀಲ್