ಬೆಂಗಳೂರು,ಮೇ.20- ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರ ನೇಮಕಾತಿಗೆ ರಾಜಧಾನಿ ಬೆಂಗಳೂರಿನಲ್ಲಿ ವೇದಿಕೆ ಸಿದ್ದ ಪಡಿಸಿದ್ದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಐಸಿಸ್ ಉಗ್ರ ಸಂಘಟನೆಗೆ(ಇಸ್ಲಾಮಿಕ್ ಸ್ಟೇಟ್)ಯುವಕರ ನೇಮಕಾತಿಗಾಗಿ ದೊಡ್ಡ ವೇದಿಕೆಯೇ ಸಿದ್ದವಾಗಿದ್ದನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬೇಧಿಸಿದೆ.
ಐಸಿಎಸ್ ಗೆ ಉಗ್ರರ ನೇಮಕಾತಿ ಹಾಗು ತರಬೇತಿ ವಿಚಾರದ ಸುಳಿವು ಆಧರಿಸಿ ಕಾರ್ಯಾಚರಣೆ ಕೈಗೊಂಡ ಎನ್ಐಎ ಅಧಿಕಾರಿಗಳು ಉಗ್ರರ ನೇಮಕಾತಿಗೆ ನಗರದಲ್ಲಿ ವೇದಿಕೆ ಸಿದ್ದಪಡಿಸಿರುವುದನ್ನು ಬಯಲಿಗೆಳೆದ ಸಂಬಂಧ ಪೂರಕ ಆರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಮುಖವಾಗಿ, ಜೊಹೈಬ್ ಮನ್ನ ಹಾಗು ಅಬ್ದುಲ್ ಖಾದೀರ್ ನಗರದಲ್ಲಿ ಸುಮಾರು 28 ಅನ್ಯಕೋಮಿನ ಯುವಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರು.ಊಟದ ಪಾರ್ಟಿಯೊಂದರ ನೆಪದಲ್ಲಿ ಕರೆದು ಯುವಕರಿಗೆ ಉಗ್ರವಾದದ ಭಾಷಣ ಮಾಡಿ ಪ್ರಚೋದಿಸಿ ಐಸಿಸ್ ಸೇರಲು ಪ್ರೇರೇಪಿಸಲಾಗುತ್ತಿತ್ತು ಎನ್ನುವ ಆತಂಕಕಾರಿ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಿರಿಯಾದಲ್ಲಿ ಕುಖ್ಯಾತ ಬಂಡುಕೋರ ಎಂದು ಗುರುತಿಸಿಕೊಂಡಿದ್ದ ಮಹಮ್ಮದ್ ಸಾಜಿದ್ ನಗರಕ್ಕೆ ಆಗಮಿಸಿ ಯುವಕರನ್ನು ಸೆಳೆಯುವ ಭಾಷಣ ಮಾಡಿದ್ದ. ಈತ ಮೂರು ದಿನಗಳ ಕಾಲ ನಗರದಲ್ಲೇ ಉಳಿದುಕೊಂಡು ಯುವಕರಿಗೆ ಐಸಿಸ್ ಸೇರಲು ಪ್ರೇರೇಪಿಸಿದ್ದಾನೆ.
ಅಷ್ಟೇ ಅಲ್ಲ, ನಗರದಿಂದ ಮರಳಿ ಹೋಗುವಾಗ ಹಲವು ಯುವಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಆತನನ್ನು ಬೀಳ್ಕೊಟ್ಟಿದ್ದರು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ವಿವರವಾಗಿ ತಿಳಿಸಿದೆ.
ಮೂವರು ಸೆರೆ:
ಐಸಿಎಸ್ ಗೆ ಉಗ್ರರ ನೇಮಕಾತಿ ಹಾಗು ತರಬೇತಿ ಸಂಬಂಧ ತಿಲಕ ನಗರದ ಮುಹಮ್ಮದ್ ತೌಕಿರ್ ಮಹಮೂದ್, ಹಾಗು ಕಾಮನಹಳ್ಳಿಯ ಜೊಹೈಬ್ ಮನ್ನಾ, ಹಾಗು ಭಟ್ಕಳದ ಮೊಹಮ್ಮದ್ ಶಿಹಾಬ್ ನನ್ನು ಅಧಿಕಾರಿಗಳು ಬಂಧಿಸಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 ಬಿ, 125 ಮತ್ತು ಸೆಕ್ಷನ್ 17, 18 ಮತ್ತು 18 ಬಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಕೆಲದಿನಗಳ ಹಿಂದೆ ಚಾರ್ಜಶೀಟ್ ಸಲ್ಲಿಸಲಾಗಿತ್ತು.
ನೇಮಕ ಬಹಿರಂಗ:
ಈ ಸಂಬಂಧ ತನಿಖೆಯನ್ನು ತೀವ್ರಗೊಳಿಸಿ ಪೂರಕ ಚಾರ್ಜಶೀಟ್ ಸಲ್ಲಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳಾದ ಮುಹಮ್ಮದ್ ತೌಕಿರ್ ಮಹಮೂದ್ ಮತ್ತು ಜೊಹೈಬ್ ಮನ್ನಾ ಅವರು ಕುರಾನ್ ಸರ್ಕಲ್ ಗುಂಪಿನ ಮೂಲಕ ಐಸಿಎಸ್ ಗೆ ಮುಸ್ಲಿಂ ಯುವಕರನ್ನು ಆಮೂಲಾಗ್ರವಾಗಿ ಮತ್ತು ನೇಮಕ ಮಾಡುವಲ್ಲಿ ತೊಡಗಿಸಿಕೊಂಡಿರುವುದು ಪ್ರಕರಣದ ತನಿಖೆಯು ಬಹಿರಂಗಪಡಿಸಿದೆ.
ಸಿರಿಯಾಕ್ಕೆ ಭೇಟಿ:
ಅವರು ಸಿರಿಯಾಕ್ಕೆ ಮೂಲಭೂತವಾದಿ ಮುಸ್ಲಿಂ ಯುವಕರ ಭೇಟಿಗೆ ಹಣಕಾಸು ಒದಗಿಸಲು ನಿಧಿಯನ್ನು ಸಂಗ್ರಹಿಸಿ ಸ್ವೀಕರಿಸುವಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿ ಮುಹಮ್ಮದ್ ತೌಕಿರ್ ಮಹಮೂದ್ ಮತ್ತು ಮೊಹಮ್ಮದ್ ಶಿಹಾಬ್ ಈ ಹಿಂದೆ ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಅಕ್ರಮವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದರು.ಈ ವಿಚಾರವಾಗಿ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ.