ಬೆಂಗಳೂರು,ಅ.19-ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಶತಪ್ರಯತ್ನ ನಡೆಸಿರುವ ಸಂಚಾರ ಪೊಲೀಸರು ಸಂಚಾರ ದಟ್ಟಣೆಯಾಗುವ ಜಂಕ್ಷನ್ಗಳಲ್ಲಿ ವಿಶೇಷ ಆದ್ಯತೆಯ ಮೇರೆಗೆ ಶನಿವಾರ ಭಾರಿ ವಾಹನಗಳ ನಿಷೇಧ ಸಮಯದ ಮಾರ್ಪಾಡು ಮಾಡಿರುವುದು ಫಲಪ್ರದವಾಗಿದೆ.
ಪ್ರತಿದಿನ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸುಗಮ ಸಂಚಾರ ದೃಷ್ಟಿಯಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಕಳೆದ ಆಗಸ್ಟ್ 2ರಂದು ಬೆಳಗ್ಗೆ 10.30ರಿಂದ 2.30ವರೆಗೆ ಸಂಜೆ 4.30ರಿಂದ ರಾತ್ರಿ 9 ಗಂಟೆವರೆಗೆ ಶನಿವಾರದಂದು ಭಾರಿ ವಾಹನಗಳ ಸಂಚಾರ ನಿಷೇಧಿಸಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಸಂಚಾರ ಪೊಲೀಸರು ಮಾಡಿದ ಈ ಬದಲಾವಣೆಯಿಂದ ಶನಿವಾರ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು.
ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿದ ಪರಿಣಾಮ ಹೊರವರ್ತುಲ ರಸ್ತೆ (ಒಆರ್ಆರ್)ಯಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಒಆರ್ಆರ್ ರಸ್ತೆಯಾಗಿರುವ ಹೆಬ್ಬಾಳ-ಸಿಲ್ಕ್ ಬೋರ್ಡ್ ಸದಾ ವಾಹನ ಸಂಚಾರದಿಂದ ಕೂಡಿದ್ದು, ಶನಿವಾರದಂದು ಶೇ.24ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಅದೇ ರೀತಿ ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ಏರ್ಪೋರ್ಟ್ವರೆಗೂ ಪೀಕ್ ಅವರ್ನಲ್ಲಿ ಶೇ.14 ಹಾಗೂ ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಶೇ.8ರಷ್ಟು ವಾಹನ ದಟ್ಟಣೆಯಲ್ಲಿ ಇಳಿಕೆಯಾಗಿದೆ.
ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಅಲ್ಲದೆ, ನಗರಕ್ಕೆ ಪ್ರವೇಶಿಸುವ ಈ ರಸ್ತೆಗಳಲ್ಲಿ ಸದಾ ನಿರಂತರ ವಾಹನ ದಟ್ಟಣೆ ಇರುತ್ತದೆ. ಪೀಕ್ ಅವರ್ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧದ ಸಮಯ ಮಾರ್ಪಾಡಿನಿಂದ ಕೊಂಚ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ. ಅಲ್ಲದೆ, ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಸರ್ಕಾರಿ ರಜೆಯಿದೆ. ಅಲ್ಲದೆ, ಪ್ರತಿ ಶನಿವಾರ ಶಾಲಾ ಮಕ್ಕಳಿಗೆ ಅರ್ಧ ದಿನ ರಜೆಯಿರುವುದರಿಂದ ಇದು ಒಂದು ಸಂಚಾರ ದಟ್ಟಣೆ ಇಳಿಯಲು ಕಾರಣವಾಗಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಲ್ಲಿ Traffic jam ಕಡಿಮೆ ಮಾಡಲು ಏನೆಲ್ಲಾ ಕಸರತ್ತು.
Previous Articleಪ್ರಹ್ಲಾದ ಜೋಶಿ ಸೋದರ ಮಾಡಿದ್ದೇನು.
Next Article ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಈಶ್ವರಪ್ಪ.