ಬೆಂಗಳೂರು ಸೆ.10-
ಇನ್ಸ್ಟಾಗ್ರಾಂ ಮೂಲಕ ಆರ್ಡರ್ ಮಾಡಿ ಥೈಲ್ಯಾಂಡ್ನಿಂದ ಹೈಡ್ರೋ ಗಾಂಜಾ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿ ಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತೌನೇಶ್ ಬಂಧಿತ ಆರೋಪಿಯಾಗಿದ್ದು ಆತನಿಂದ 1.22 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಅಂಧ್ರಹಳ್ಳಿಯ ಕಾಲೇಜೊಂದರ ಬಳಿ ತೌನೇಶ್ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಗಿರಾಕಿಗಳಿಗೆ ಕಾದು ಕುಳಿತಿದ್ದಾಗ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಆರೋಪಿ ಬಳಿಯಿದ್ದ 2 ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ತೌನೇಶ್ಗೆ ಕೇರಳ ಮೂಲದ ಸೈಜು ಎಂಬಾತನಿಂದ ಹೈಡ್ರೋ ಗಾಂಜಾ ಬರುತ್ತಿತ್ತು .
ತೌನೇಶ್ಗೆ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಸೈಜು ಪರಿಚಯವಾಗಿದ್ದ. ಈತ ವಿಮಾನ ನಿಲ್ದಾಣದಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದ. ಸಿಂಥೆಟಿಕ್ ಪೇಪರ್ನಲ್ಲಿ ಸುತ್ತಿ ಬಿಸ್ಕೆಟ್ ಬಾಕ್ಸ್ನಲ್ಲಿ ಗಾಂಜಾ ತರಲಾಗುತ್ತಿತ್ತು. ಸಿಂಥೆಟಿಕ್ ಪೇಪರ್ನಲ್ಲಿ ಸುತ್ತಿರುವುದರಿಂದ ವಾಸನೆ ಕೂಡ ಬರುತ್ತಿರಲಿಲ್ಲ. ಜೊತೆಗೆ, ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಎಂಬುದು ಗೊತ್ತಾಗುತ್ತಿರಲಿಲ್ಲ.
ಬಟ್ಟೆ ವ್ಯಾಪಾರಿಯಾಗಿರುವ ತೌನೇಶ್ ಕಳೆದ 2020 ರಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ 4 ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.