ಬೆಂಗಳೂರು,ಮಾ.7:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬಜೆಟ್ ನಲ್ಲಿ ದೊಡ್ಡ ಕೊಡುಗೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸುರಂಗ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತೆಗೆದಿರಿಸಿದ್ದಾರೆ.
ಪ್ರತಿ ವರ್ಷ ನೀಡುತ್ತಿರುವ 3,000 ಕೋಟಿ ರೂ. ಅನುದಾನವನ್ನು ಪ್ರಸಕ್ತ ವರ್ಷದಲ್ಲಿ 7,000 ಕೋಟಿಗೆ ಹೆಚ್ಚಿಸಲಾಗುವುದು. ಈ ಅನುದಾನವನ್ನು ಬಳಸಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಲು ಹೊಸದಾಗಿ ಎಸ್.ಪಿ.ವಿ. ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ಬಿಬಿಎಂಪಿಗೆ ಅಂದಾಜು ಮೊತ್ತ 40,000 ಕೋಟಿ ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ 19,000 ಕೋಟಿ ಗ್ಯಾರಂಟಿಯನ್ನು ಸರ್ಕಾರದಿಂದ ಒದಗಿಸಲಾಗಿದೆ.
ಬಿಬಿಎಂಪಿ ವತಿಯಿಂದ ʻಬ್ರ್ಯಾಂಡ್ ಬೆಂಗಳೂರು – ಹಸಿರು ಬೆಂಗಳೂರುʼ ಅಡಿಯಲ್ಲಿ 35 ಕೋಟಿ ವೆಚ್ಚದ 14 ಕೆರೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನರುಜ್ಜೀವನ ಕಾಮಗಾರಿಗಳನ್ನು ₹234 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ
ನಮ್ಮ ಮೆಟ್ರೋʼ ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸುತ್ತಿದ್ದು, ಪ್ರಸ್ತುತ 68 ನಿಲ್ದಾಣಗಳನ್ನೊಳಗೊಂಡಂತೆ 79.65 ಕಿ.ಮೀ. ಮಾರ್ಗದ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ಮೆಟ್ರೊ ಜಾಲವನ್ನು ದೇವನಹಳ್ಳಿಯವರೆಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ನಮ್ಮ ಮೆಟ್ರೊ ಹಂತ-3 ಯೋಜನೆಯೊಂದಿಗೆ 8,916 ಕೋಟಿ ವೆಚ್ಚದಲ್ಲಿ 4೦.50 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ರಸ್ತೆಯನ್ನು ನಿರ್ಮಿಸಲಾಗುವುದು.ರಾಜಾ ಕಾಲುವೆಯ ಬಫರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು
ಬೆಂಗಳೂರು ಜಲ ಮಂಡಳಿಯು
ಎಸ್.ಟಿ.ಪಿ ಘಟಕಗಳ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗವನ್ನು ಪಡೆಯುವ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಸರ್ಕಾರವು ಪಾಲಿಕೆ ಹಾಗೂ ಜಲ ಮಂಡಳಿಗೆ 3,000 ಕೋಟಿ ಆರ್ಥಿಕ ನೆರವು ನೀಡಲಿದೆ.
ಬೆಂಗಳೂರನ್ನು ಅಂತರರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು, ʻಬ್ರ್ಯಾಂಡ್ ಬೆಂಗಳೂರುʼ ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ವೆಚ್ಚದಲ್ಲಿ ʻಸಮಗ್ರ ಆರೋಗ್ಯ ಯೋಜನೆʼಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು
Previous Articleಸಮಾನತೆಯತ್ತ ದಾಪುಗಾಲಿಟ್ಟ ಬಜೆಟ್
Next Article ಜಟಕಾ ಬಂಡಿಯ ಮುಸ್ಲಿಂ ಬಜೆಟ್ ಎಂದ ಅಶೋಕ್