ಬೆಂಗಳೂರು,ಜೂ.25-
ಸನಾತನ ಧರ್ಮದ ಕುರಿತು ವಿವಾದಾಸ್ಪದ ಹೇಳಿಕೆ ನೀಡಿದ ಆರೋಪದಲ್ಲಿ ಕೋರ್ಟ್ ವಿಚಾರಣೆ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟ್ಯಾಲಿನ್ ಅವರಿಗೆ ಬೆಂಗಳೂರು ಕೋರ್ಟ್ ಜಾಮೀನು ನೀಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಸಮನ್ಸ್ ಪಡೆದಿದ್ದ ಸಚಿವ ಉದಯನಿಧಿ ಸ್ಟಾಲಿನ್ ಬೆಂಗಳೂರು ನಗರದ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡರು.
ಉದಯನಿಧಿ ವಿರುದ್ಧ ಪರಮೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.
ಹೀಗಾಗಿ ಅವರು ಕೋರ್ಟ್ ಮುಂದೆ ಹಾಜರಾದರು
ಉದಯನಿಧಿ ಸ್ಟಾಲಿನ್ ಆಗಮನದ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮೂವರು ಇನ್ಸ್‌ಪೆಕ್ಟರ್ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಏನಿದು ವಿವಾದ:
ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಕ್ರೀಡಾ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಕಳೆದ ವರ್ಷ ಸೆಪ್ಟೆಂಬರ್ 4ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮ ಡೆಂಗಿ, ಮಲೇರಿಯಾ ಹಾಗೂ ಕೊರೊನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅದು ವಿರುದ್ಧವಾಗಿದೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ದೇಶಾದ್ಯಂತ ಸಂಚಲನ:
ಉದಯನಿಧಿ ಸ್ಟಾಲಿನ್ ಅವರು ಈ ಹೇಳಿಕೆ ನೀಡಿದ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಬಿಜೆಪಿ ನಾಯಕರಂತೂ ಉದಯನಿಧಿ ಸ್ಟಾಲಿನ್ ಅವರ ಮೇಲೆ ಮುಗಿಬಿದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ ಸ್ಟಾಲಿನ್, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಕಾನೂನು ಹೋರಾಟಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.
Previous Articleದರ್ಶನ್ ವಿರುದ್ಧ Chargsheet ಸಿದ್ದ
Next Article ಪ್ರಜ್ವಲ್ ಪ್ರಕರಣದಲ್ಲಿ ಪ್ರೀತಂಗೌಡ ಅವರಿಗೂ ಗುನ್ನ.