ಬೆಂಗಳೂರು ಅ. 29: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು, ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ಅಪಾರ ಪ್ರಮಾಣದ ನೀರು ತುಂಬಿದ್ದು, ಬಸ್ಸು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.
ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿ, ಬಸವನಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯ ಅಂಡರ್‍ಪಾಸ್‍ನಲ್ಲಿ ನೀರು ತುಂಬಿದ್ದು ಹಲವು ವಾಹನಗಳು ಮುಳುಗಡೆಯಾಗಿವೆ.
ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನಗಳನ್ನು ಬಿಟ್ಟು ಪ್ರಯಾಣಿಕರು ಹಾಗೂ ಜನರು ಹೊರಬಂದಿದ್ದಾರೆ. ವಡೇರಹಳ್ಳಿ ಬಳಿ ಕೂಡ ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿ ಅನಾಹುತವನ್ನೇ ಸೃಷ್ಟಿಸಿದೆ. ರಾಮನಗರದ ರೈಲು ನಿಲ್ದಾಣದ ಹಳಿಗಳ ಮೇಲೆ ಭಾರೀ ಪ್ರಮಾಣದ ನೀರು ನಿಂತಿದ್ದು, ಸಂಚಾರವು ಅಸ್ತವ್ಯಸ್ತಗೊಂಡಿತ್ತು
ಭಾರೀ ಮಳೆಯಿಂದಾಗಿ ರಾಮನಗರದ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ ಚಾಮುಂಡಿಪುರದ ಬಳಿ ಇರುವ ಬೋಳಪ್ಪನಹಳ್ಳಿ ಕೆರೆ ಏರಿ ಬಿರುಕುಬಿಟ್ಟಿದ್ದು, ಅಪಾಯದ ಆತಂಕ ಎದುರಾಗಿದೆ.
ಇದರಿಂದ ಸಣ್ಣ ನೀರಾವರಿ ಅಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೆರೆ ಕೋಡಿ ಒಡೆದು ಕೆರೆಯಿಂದ ನೀರು ಹರಿಸುವ ಪ್ರಯತ್ನವನ್ನು ಮಾಡಿದ್ದಾರೆ. ರಾಮನಗರದ ಸೀರಳ್ಳ, ಅರ್ಕೇಶ್ವರ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿ ಮಾಡಿದೆ.
ಮಳೆ ಹಾನಿ ಪ್ರದೇಶಗಳಲ್ಲಿ ಸಂಚರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಡಳಿತದ ಜೊತೆ ಮಾತುಕತೆ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಮೂಲಕ ಸಂಚರಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದೀಗ ರಾಮನಗರ ಜಿಲ್ಲಾಡಳಿತ ಈ ರಸ್ತೆ ಬಳಸದಂತೆ ಸೂಚನೆ ನೀಡಿದ್ದು ಪರ್ಯಾಯ ಮಾರ್ಗ ಬಳಸಲು ಸಲಹೆ ಮಾಡಿದೆ.
Previous Articleಇಂದೂ ಬರಲಿಲ್ಲ ಹಿಜಾಬ್ ತೀರ್ಪು..
Next Article ಪೊಲೀಸ್ ಸರ್ಪಗಾವಲಿನಲ್ಲಿ ಮುರುಘಾ ಶರಣರು..