ಬೆಂಗಳೂರು,ಜ.16:
ಆಡಳಿತರೂಢ ಕಾಂಗ್ರೆಸ್ಸಿನಲ್ಲಿ ವಿದ್ಯಮಾನಗಳು ತೀವ್ರ ಸ್ವರೂಪದಿಂದ ನಡೆಯುತ್ತಿದ್ದು ಬೆಳಗಾವಿ ರಾಜಕಾರಣದಿಂದ ಈ ಸರ್ಕಾರ ಪತನ ಹೊಂದಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಬೀಳುವುದು ಬೆಳಗಾವಿಯಿಂದಲೇ. ಒಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷಿ ಹೆಬ್ಬಾಳ್ಕರ್. ಇನ್ನೊಂದು ಕಡೆ ಡಿಕೆ ಶಿವಕುಮಾರ್ ವರ್ಸಸ್ ಸತೀಶ್ ಜಾರಕಿಹೊಳಿ.ಈ ಎಲ್ಲಕ್ಕೂ ಸಿದ್ದರಾಮಯ್ಯ ಅವರೇ ಸೂತ್ರಧಾರಿ ಎಂದು ತಿಳಿಸಿದರು
ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಎಲ್ಲರೂ ಅಖಾಡಕ್ಕಿಳಿದು ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಅವರು ತಾವು ಕುರ್ಚಿಬಿಡುವುದಿಲ್ಲ ಎನ್ನುತ್ತಿದ್ದಾರೆ ಮತ್ತೊಂದೆಡೆ ಶಿವಕುಮಾರ್ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯುವುದಿಲ್ಲ ಎನ್ನುತ್ತಿದ್ದಾರೆ ಎಂದು ವಿವರಿಸಿದರು
ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಶಿವಕುಮಾರ್ ಒಬ್ಬಂಟಿ ಆಗಿದ್ದಾರೆ. ಹಾಗಾಗಿ ಹೈಕಮಾಂಡ್ ಪಾದವೇ ಗತಿ ಎಂದು ಹೈಕಮಾಂಡ್ ಬಳಿ ಕೂತಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಯಾವ ರೀತಿ ಸಿಎಂ ಕುರ್ಚಿ ಬಿಡುತ್ತಿಲ್ಲವೋ ಹಾಗೆ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ. ಸುರ್ಜೇವಾಲ ಮೊನ್ನೆ ಬಹಿರಂಗವಾಗಿ ಮಾತಾಡಬೇಡಿ ಅಂದರು. ನಿನ್ನೆಯಿಂದಲೂ ಎಲ್ಲರೂ ಬಹಿರಂಗವಾಗೇ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಳೆದ ಒಂದು ತಿಂಗಳಿನಿಂದ ಸಚಿವರು, ಶಾಸಕರು, ಪದಾಧಿಕಾರಿಗಳು, ಎಲ್ಲರೂ ಸಿದ್ದರಾಮಯ್ಯನವರಿಗೆ ಜೈ ಜೈ ಅನ್ನುತ್ತಿದ್ದಾರೆ. ಅವರೇ ಅಧಿಕಾರದಲ್ಲಿ ಮುಂದುವರೆಯಲಿ ಹೇಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಪಕ್ಷದಲ್ಲಿ ಕವಡೆ ಕಾಸಿನ ಕಿಮಿತ್ತಿನ ಬೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನನಗೆ ಯಾರ ಬೆಂಬಲವೂ ಬೇಡ. ಯಾವ ಶಾಸಕರು, ಸಚಿವರ ಬೆಂಬಲವೂ ಬೇಡ ಎಂದು ಹೇಳಿರುವ ಉದ್ದೇಶವೇ ಡಿ.ಕೆ.ಶಿವಕುಮಾರ್ ಗೆ ಯಾರು ಕೂಡ ಬೆಂಬಲ ಕೊಡುತ್ತಿಲ್ಲ ಎಂಬ ಕಾರಣಕ್ಕಾಗಿಯೇ. ಹಾಗಾಗಿ ಅವರು ಪಕ್ಷದಲ್ಲಿ ಒಬ್ಬಂಟಿಯಾಗಿದ್ದಾರೆ. ಹೈಕಮಾಂಡ್ ಪಾದವೇ ಗತಿ ಎಂದು ದೆಹಲಿಯಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ.ಜನರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರಿಗೆ ಯಾವುದನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಆರ್ಥಿಕ ದುಸ್ಥಿತಿಯಲ್ಲಿದೆ. ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಆಡಳಿತ ಮರೆತು ದೆಹಲಿಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಭವಿಷ್ಯ ನುಡಿದರು.
Previous Articleಶಿವಕುಮಾರ್ ವಿರುದ್ಧ ಎಲ್ಲರೂ ಒಟ್ಟಾಗುತ್ತಿದ್ದಾರಾ..?
Next Article ಇದಕ್ಕಾಗಿ ನಡೀತು ಕೊಲೆ