ಬೆಂಗಳೂರು,ಜೂ.18-ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪದ ಸಂಬಂಧ ಮಾಜಿ ಸಚಿವ,ಶಾಸಕ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದ ಮೊದಲ ಆರೋಪಿ ಎಚ್.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಇದ್ದುದರಿಂದ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು.
ಅವರನ್ನು ಬಂಧಿಸದಂತೆ ಹೈಕೋರ್ಟ್‌ನ ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿತ್ತು. ತನಿಖಾಧಿಕಾರಿ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ಇದೇ 7ರಂದು ಸೂಚಿಸಿತ್ತು.
ಭವಾನಿ ರೇವಣ್ಣನವರ ಪತಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಅವರ ಪುತ್ರ – ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ – ಇಬ್ಬರೂ ತಮಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಕೆಆರ್ ನಗರದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಅದಾಗಿ ಕೆಲವೇ ದಿನಗಳಲ್ಲಿ ಆಕೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಪುತ್ರ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಕ್ಷ್ಯ ನುಡಿಯಲು ಬಾರದಂತೆ ಆಕೆಯನ್ನು ತಡೆಯಲು ಅಪಹರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವಲ್ಲದೆ, ಈ ಕೆಲಸವನ್ನು ರೇವಣ್ಣನವರೇ ಮಾಡಿಸಿದ್ದಾರೆಂದು ಹೇಳಲಾಗಿತ್ತು. ಅದೇ ವೇಳೆ, ರೇವಣ್ಣನವರಿಗೆ ಸೇರಿದ್ದೆನ್ನಲಾದ ಫಾರ್ಮ್ ಹೌಸ್ ಒಂದರಲ್ಲಿ ಸಂತ್ರಸ್ಥೆಯನ್ನು ಪೊಲೀಸರು ರಕ್ಷಿಸಿದ್ದರು. ಅದಾದ ನಂತರ, ನಡೆದ ತನಿಖೆಯಲ್ಲಿ ಅಪಹರಣಕ್ಕೆ ಬಳಸಲಾಗಿದ್ದ ಕಾರು ಭವಾನಿ ರೇವಣ್ಣನವರದ್ದಾಗಿದ್ದು, ಅವರ ಕುಮ್ಮಕ್ಕಿನಿಂದಲೇ ಮಹಿಳೆಯರ ಅಪಹರಣವಾಗಿದೆ, ಜೊತೆಗೆ, ಭವಾನಿ ರೇವಣ್ಣನವರ ಕಾರಿನ ಚಾಲಕ ಅಜಿತ್ ಎಂಬಾತನೂ ಭವಾನಿಯವರ ಸೂಚನೆಯ ಮೇರೆಗೆ ಅಪಹರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು.