ಬೆಂಗಳೂರು,ಮೇ.31-
ಲೈಂಗಿಕ ಕಿರುಕುಳದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ
ಮಾಜಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ಮತ್ತೊಂದು ನೋಟೀಸ್ ಜಾರಿ ಮಾಡಿದ್ದಾರೆ.
ಈ ಬಾರಿ, ನೋಟೀಸ್ ನ್ನು ಅವರ ಮನೆಯ ಬಾಗಿಲಿಗೆ ಅಂಟಿಸಲಾಗಿದ್ದು, ವಿಚಾರಣೆಗೆ ನಾವೇ ತಮ್ಮ ಮನೆಗೇ ಬರುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.ಮತ್ತೊಂದೆಡೆ ಭವಾನಿ ರೇವಣ್ಣ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತೀರ್ಪಿಗೆ ಬರುತ್ತಿದೆ. ಅದರ ಬೆನ್ನಲ್ಲೇ ಎಸ್‌ಐಟಿ ಮತ್ತೊಂದು ನೋಟೀಸ್ ನೀಡಿದೆ.
ಕೆ.ಆರ್ ನಗರ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೊಟೀಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಳೆ(ಜೂ.1) ತನಿಖೆಗೆ ತನಿಖಾಧಿಕಾರಿಗಳು ಬರಲಿದ್ದು, ತಾವು ನೀಡಿದ ಈ ವಿಳಾಸದಲ್ಲಿ ತಮ್ಮನ್ನು ತನಿಖೆಗೆ ಒಳಪಡಿಸಲಾಗುವುದು. ಅಗತ್ಯ ಸಹಕಾರ ನೀಡಬೇಕು” ಎಂದು ನೊಟೀಸ್ ನೀಡಿದ್ದಾರೆ.
“ಈ ಹಿಂದೆ ನೀಡಿದ್ದ ನೋಟೀಸ್‌ಗೆ ನೀವು ಉತ್ತರಿಸಿಲ್ಲ.ಕಳೆದ ಮೇ.15ರಂದು ನೀಡಿದ ನೋಟೀಸ್‌ಗೆ, ಹೊಳೆನರಸೀಪುರದ ಚನ್ನಾಂಭಿಕ ನಿವಾಸದಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದೀರಿ. ಈ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇದೆ. ಆದ್ದರಿಂದ ನೀವು ಹೇಳಿರುವಂತೆ ನಾವು ನಿಮ್ಮನ್ನು ನಾಳೆ ವಿಚಾರಣೆಗೆ ಒಳಪಡಿಸಲಿದ್ದು, ಖುದ್ದು ಹಾಜರಿರಬೇಕು. ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ಒಳಗೆ ವಿಚಾರಣೆಗೆ ಆಗಮಿಸುತ್ತೇವೆ. ಆ ಸಂದರ್ಭ ಖುದ್ದು ಮನೆಯಲ್ಲಿ ಹಾಜರಿರಬೇಕು” ಎಂದು ಎಸ್‌ಐಟಿ ಮುಖ್ಯಸ್ಥ ಹೇಮಂತ್‌ಕುಮಾರ್ ಆದೇಶಿಸಿದ್ದಾರೆ.
ಭವಾನಿ ರೇವಣ್ಣ ಅವರಿಗೆ ಇದುವರೆಗೆ ಎರಡು ನೋಟೀಸ್‌ಗಳನ್ನು ನೀಡಲಾಗಿದೆ. ನಂತರ ಎಸ್ಐಟಿಗೆ ಪತ್ರ ಬರೆದಿದ್ದ ಭವಾನಿ, ಅವಶ್ಯವಿದ್ದರೆ ತನಿಖೆಗೆ ತಮ್ಮ ಮನೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಾವು ವಿಚಾರಣೆಗೆ ಬರುತ್ತಿರುವುದಾಗಿ ಎಸ್ಐಟಿಯಿಂದ ನೊಟೀಸ್ ಹೋಗಿದೆ. ಹಾಸನ ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಹಾಗೂ ಭವಾನಿ ನಿವಾಸದ ಬಾಗಿಲಿಗೆ ಎಸ್ಐಟಿ ತಂಡ ನೋಟೀಸ್ ಅಂಟಿಸಿದೆ. ಹೀಗಾಗಿ ನಾಳೆ ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಅವರ ಮೊದಲ ಸುತ್ತಿನ ವಿಚಾರಣೆ ನಡೆಯಲಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರಂದೇ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ. ಅತ್ತ, ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಭವಾನಿ ರೇವಣ್ಣ ಪರ ವಾದ ಮಂಡಿಸಿದ ವಕೀಲ ಸಂದೇಶ ಚೌಟ, “ಎಫ್ಐಆರ್ ದಾಖಲಿಸಿ 27 ದಿನಗಳಾದರೂ ಭವಾನಿ ರೇವಣ್ಣ ಅವರಿಗೆ ಎಸ್ಐಟಿ ನೋಟಿಸ್ ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಂತರ ಬೆಟ್ಟದಷ್ಟು ದಾಖಲೆ ಇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಇದುವರೆಗೂ ಏಕೆ ವಿಚಾರಣೆಗೆ ಕರೆಯಲಿಲ್ಲ? ತನಿಖೆಗೆ ಸಹಕರಿಸುವುದಾಗಿ ಈ ಹಿಂದೆಯೇ ಎಸ್ಐಟಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭವಾನಿಗೆ ನಿರೀಕ್ಷಣಾ ಜಾಮೀನು ನೀಡಬೇಕು” ಎಂದರು