ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ.. ಶತ್ರುಗಳೂ ಅಲ್ಲ.. ಎನ್ನುವುದು ನಾಣ್ನುಡಿ. ಇಂದು ಹಾವು ಮುಂಗುಸಿಗಳಂತೆ ಕಚ್ಚಾಡುವವರು ನಾಳೆ ಕೃಷ್ಣ -ಕುಚೆಲರಂತೆ ಹೆಗಲ ಮೇಲೆ ಕೈ ಹಾಕಿ ತಿರುಗಾಡುತ್ತಾರೆ. ಇವರ ನಡುವೆ ಹೋದವರು ಮಾತ್ರ ಇಂಗು ತಿಂದ ಮಂಗನಾಗುತ್ತಾರೆ. ಇದಕ್ಕೆ ಉದಾಹರಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತ್ಹು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್.
ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಅಶ್ವಥ್ ನಾರಾಯಣ್ ಅವರ ಹಗರಣಗಳನ್ನ ಶಿವಕುಮಾರ್ ನೇತೃತ್ವದ ತಂಡ ಬಯಲಿಗೆಳೆಯುತ್ತ ಸಾಗಿದೆ. ಇದರಿಂದ ಮುಜುಗರಗೊಳಗಾಗುತ್ತಿರುವ ಸಚಿವರು ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ವಿರುದ್ಧ ಮುಗಿಬೀಳುತ್ತಿದ್ದಾರೆ. ಈ ನಡುವೆ ಸಚಿವ ಅಶ್ವಥ್ ನಾರಾಯಣ್ ಕಾಂಗ್ರೆಸ್ ನಾಯಕ ಎಮ್ ಬಿ ಪಾಟೀಲ ಅವರನ್ನ ಭೇಟಿಯಾಗಿದ್ದರು ಎಂಬ ಸುದ್ದಿ ಹಾಗು ಇದಕ್ಕೆ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ತಮ್ಮದೇ ಪಕ್ಷದ ಅಧ್ಯಕ್ಷರ ಹೇಳಿಕೆಯ ಬಗ್ಗೆ ಎಂ ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ರೆ, ಮಾಜಿ ಸಂಸದೆ ರಮ್ಯಾ ಮಾಡಿದ ಟ್ವೀಟ್ ಅಂತೂ ಕೋಲಾಹಲವನ್ನೇ ಸೃಷ್ಠಿಸಿತ್ತು. ಇದನ್ನಿಟ್ಟುಕೊಂಡು ಬಿಜೆಪಿ ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿತು. ಶಿವಕುಮಾರ್ ಮತ್ತು ಎಂ ಬಿ ಪಾಟೀಲ್ ಬದ್ದ ವೈರಿಗಳು ಎನ್ನುವಂತೆ ಚಿತ್ರಿಸಿತ್ತು. ಆದರೆ ರಾಜಸ್ಥಾನದ ಉದಯಪುರದಿಂದ ಬಂದಿರುವ ಈ ಚಿತ್ರಗಳು ಅಸಲಿ ಸುದ್ದಿಯನ್ನು ತಿಳಿಸುತ್ತವೆ. ಶಿವಕುಮಾರ್ ಮತ್ತು ಎಂ ಬಿ ಪಾಟೀಲ್ ರಾಜಕೀಯವಾಗಿ ಒಂದು ಪಕ್ಷದಲ್ಲಿನ ಕಾರ್ಯಕರ್ತರಷ್ಟೇ ಅಲ್ಲ.. ಪರಸ್ಪರ ಆಪ್ತಮಿತ್ರರು. ರಾಜಕೀಯ, ಉದ್ಯಮ, ಎಲ್ಲದರಲ್ಲೂ ವಿಶ್ವಾಸಿಗಳು. ಈ ಇಬ್ಬರ ನಡುವಿನ ಸಂಬಂಧಕ್ಕೆ ಇಲ್ಲಿಯವರೆಗೆ ಯಾವುದೇ ಚ್ಯುತಿ ಬಂದಿಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ, ಆದರಿಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ದೊಡ್ಡದ್ದನ್ನು ಕಲ್ಪಿಸಿ ಮಾತನಾಡಲು ಹೋದವರ ಸ್ಥಿತಿ ಮಾತ್ರ ಇಂಗು ತಿಂದ ಮಂಗನಂತಾಗಿದೆ.