ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಇಂದು ಪಾಕಿಸ್ತಾನದ ಆಮದು ವಸ್ತುಗಳ ಮೇಲೆ ನಿಷೇಧ ಹೇರಿತ್ತು. ಅದರ ಬೆನ್ನಲ್ಲೇ ಪಾಕಿಸ್ತಾನಿ ಹಡಗುಗಳ ಮೇಲೆ ನಿಷೇಧ ಹೇರಿದೆ. ಭಾರತದ ಬಂದರುಗಳಲ್ಲಿ ಪಾಕಿಸ್ತಾನಿ ಹಡಗುಗಳ ಪ್ರವೇಶವನ್ನು ನಿಷೇಧಿಸಿರುವುದಾಗಿ ಭಾರತ ಘೋಷಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಭಾರತ ಚಾಟಿ ಬೀಸುತ್ತಲೇ ಇದೆ. ಪಹಲ್ಗಾಮ್ ದಾಳಿಯ ಬಳಿಕ ಭಾರತ ನೆರೆಯ ದೇಶವಾದ ಪಾಕಿಸ್ತಾನದ (Pakistan) ವಿರುದ್ಧ ಅನೇಕ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಎರಡೂ ದೇಶಗಳ ನಡುವೆ ಯುದ್ಧ ನಡೆಯುವ ಸಾಧ್ಯತೆಯ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಪಾಕಿಸ್ತಾನದೊಂದಿಗಿನ ಎಲ್ಲ ಸಂಪರ್ಕಗಳನ್ನೂ ಭಾರತ ಕಳೆದುಕೊಳ್ಳುತ್ತಿದೆ. ಇದೀಗ ಭಾರತದ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಹಾಗೇ, ಸುರಕ್ಷತಾ ದೃಷ್ಟಿಯಿಂದ ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವುದನ್ನು ಕೂಡ ನಿಷೇಧಿಸಿದೆ.