Turkey,ಫೆ.7-
Syria ದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 5,000 ಗಡಿ ದಾಟಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು ಅವರಿಗೆ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. Turkey ಯ ಸ್ಥಳೀಯ ಕಾಲಮಾನದ ಪ್ರಕಾರ ನಿನ್ನೆ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿ ಕ್ಷಣ ಮಾತ್ರದಲ್ಲಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಅನೇಕರು ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ‘ತೀವ್ರ ದಟ್ಟ ಮಂಜಿನ ಹವಾಮಾನದಿಂದ ತುರ್ತು ರಕ್ಷಣಾ ಕಾರ್ಯಗಳಿಗೆ ಅಡಚಣೆ ಉಂಟಾಯಿತು’ ಎಂದ ಸ್ಥಳೀಯರು ಭೀಕರ ದೃಶ್ಯಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಭೂಕಂಪ ಪೀಡಿತ ರಾಷ್ಟ್ರಕ್ಕೆ ಜಗತ್ತಿನೆಲ್ಲೆಡೆಯಿಂದ ನೆರವು ಘೋಷಣೆಯಾಗಿದೆ. ಟರ್ಕಿಗೆ ಭಾರತ ಕೂಡ ಸಹಾಯಹಸ್ತ ಚಾಚಿದೆ. ‘ಟರ್ಕಿಗೆ ಅಗತ್ಯವಿರುವ ನೆರವು ನೀಡಲು ಭಾರತ ಸಿದ್ಧ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಕೆಲವೆ ಗಂಟೆಗಳಲ್ಲೇ ವಾಯುಪಡೆ ವಿಮಾನಗಳು ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್‍ನ್ನು ಟರ್ಕಿಗೆ ಕೊಂಡೊಯ್ದವು.
ಪುರುಷ ಮತ್ತು ಮಹಿಳಾ ಸಿಬ್ಬಂದಿ, ಹೆಚ್ಚು ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳ ಒಂದು ಶ್ರೇಣಿ, ಸುಧಾರಿತ ಡ್ರಿಲ್ಲಿಂಗ್ ಉಪಕರಣಗಳು ಮತ್ತು ಸಹಾಯದ ಪ್ರಯತ್ನಗಳಿಗೆ ಅಗತ್ಯವಿರುವ ಇತರ ನಿರ್ಣಾಯಕ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (National Disaster Response Force – NDRF), ಶೋಧ ಮತ್ತು ಪಾರುಗಾಣಿಕಾ ತಂಡಗಳು (Search and rescue – SAR) ಟರ್ಕಿಗೆ ಪ್ರಯಾಣ ಬೆಳೆಸಿವೆ.
‘ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು (Dog Squad), ವೈದ್ಯಕೀಯ ಸರಬರಾಜುಗಳು, ಕೊರೆಯುವ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳ ಒಂದನೇ ಬ್ಯಾಚ್ ಟರ್ಕಿಗೆ ಹೊರಟಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (Ministry of External Affairs) ವಕ್ತಾರ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕನಿಷ್ಠ 5000 ಜನರ ಸಾವಿಗೆ ಕಾರಣವಾದ ಭೂಕಂಪದ ನಂತರದ ಪರಿಣಾಮಗಳನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.