ಚಾಮರಾಜನಗರ: ಬಸ್ ನಿಲ್ದಾಣದಲ್ಲಿ ನವಜಾತ ಶಿಶುವೊಂದನ್ನು ಬ್ಯಾಗ್ ನಲ್ಲಿಟ್ಟು ಪಾಲಕರು ನಾಪತ್ತೆಯಾಗಿರುವ ಘಟನೆ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಬ್ಯಾಗ್ ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದು ಬ್ಯಾಗ್ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಬ್ಯಾಗ್ ತೆರೆದು ನೋಡಿದಾಗ 7 ದಿನದ ಗಂಡುಶಿಶು ಇರುವುದು ಪತ್ತೆಯಾಗಿದೆ.
ಹನೂರು ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿ ಬ್ಯಾಗ್ ಸಮೇತ ಮಗುವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇನ್ನು, ಈ ಮುದ್ದಾದ ಮಗುವನ್ನು ಸಾಕಲು ನಾಲ್ಕೈದು ಮಂದಿ ಮುಂದೆ ಬಂದಿದ್ದು ತಮಗೇ ಶಿಶುವನ್ನು ಕೊಡಬೇಕೆಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.
ಅನೈತಿಕ ಸಂಬಂಧದಿಂದ ಮಗು ಜನಿಸಿದ್ದರಿಂದ ಮರ್ಯಾದೆಗೆ ಅಂಜಿ ಮಗುವನ್ನು ತೊರೆದಿರಬೇಕು ಎನ್ನಲಾಗುತ್ತಿದೆ.