ಬೆಂಗಳೂರು, ಆ.8:
ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರು ಮೈಸೂರು ಪಾದಯಾತ್ರೆ ಮುಗಿಯುತ್ತಿದ್ದಂತೆ ಬಿಜೆಪಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕವನ್ನು ಒಳಗೊಂಡಂತೆ ಮತ್ತೊಂದು ಪಾದಯಾತ್ರೆ ನಡೆಸಲು ಸಜ್ಜುಗೊಳ್ಳುತ್ತಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಮತ್ತು ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಸಮರ ಘೋಷಿಸಲು ಬಿಜೆಪಿ ನಾಯಕತ್ವ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡದ ಕುರಿತು ನಡೆದಿರುವ ಪಾದಯಾತ್ರೆ ಬಿಜೆಪಿ ಪಾಳಯದಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ ಇದರಿಂದ ಬಿಜೆಪಿಗೆ ಲಾಭವಾಗುವ ಬದಲು ಜೆಡಿಎಸ್ ಗೆ ಹೆಚ್ಚಿನ ಲಾಭವಾಗಿದೆ ಎಂಬ ವ್ಯಾಖ್ಯಾನಗಳು ಹೇಳಿ ಬಂದಿವೆ ಅಲ್ಲದೆ ಈ ಪಾದಯಾತ್ರೆ ಎಲ್ಲರನ್ನೂ ಒಳಗೊಳ್ಳಲು ವಿಫಲವಾಗಿದೆ ಎಂಬ ಅಸಮಾಧಾನ ಕೂಡ ವ್ಯಕ್ತವಾಗಿದೆ.
ಪ್ರಮುಖವಾಗಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಮೈಸೂರು ಚಲೋ ಪಾದಯಾತ್ರೆ ಘೋಷಿಸುವ ಮುನ್ನ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಏಕಾಏಕಿ ಪಾದಯಾತ್ರೆ ಘೋಷಿಸುವ ಮೂಲಕ ಗೊಂದಲದಲ್ಲಿ ಬೀಳುವಂತೆ ಮಾಡಿದರು ಎಂದು ಹಲವು ನಾಯಕರು ಹೈಕಮಾಂಡ್ ಗಮನ ಸೆಳೆದಿದ್ದಾರೆ.
ಯಾವುದೇ ಪೂರ್ವ ತಯಾರಿಯೂ ಇಲ್ಲದೆ ನಡೆದ ಈ ಪಾದಯಾತ್ರೆ, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಮೈಸೂರು ಜಿಲ್ಲೆಯಲ್ಲಿ ಕೊಂಚ ಪರಿಣಾಮ ಬೀರಿರುವುದನ್ನು ಬಿಟ್ಟರೆ ರಾಜಕೀಯ ಉಳಿದ ಕಡೆ ಇದು ಯಾವುದೇ ಗಮನ ಸೆಳೆದಿಲ್ಲ. ವಿಜಯೇಂದ್ರ ಅವರ ಬೆಂಬಲಿಗರನ್ನು ಹೊರತುಪಡಿಸಿ ಬಹುತೇಕ ಪಕ್ಷದ ನಾಯಕರನ್ನು ಇದು ಒಳಗೊಂಡಿಲ್ಲ ಹೀಗಾಗಿ ಗೊಂದಲ ಬಗೆಹರಿಸುವ ದೃಷ್ಟಿಯಿಂದ ಮತ್ತೊಂದು ಪಾದಯಾತ್ರೆಯ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ.
ಪ್ರಮುಖವಾಗಿ ಬಿಜೆಪಿಯ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ರಮೇಶ್ ಜಾರಕಿಹೊಳಿ ಬಿ ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಮತ್ತೊಂದು ಪಾದಯಾತ್ರೆಯ ಅಗತ್ಯವನ್ನು ಪ್ರತಿಪಾದಿಸಿ ಹೈಕಮಾಂಡ್ ಗಮನ ಸೆಳೆದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದರ ವಿರುದ್ಧ ಜನಾಂದೋಲನ ರೂಪದಲ್ಲಿ ಈ ಪಾದಯಾತ್ರೆ ನಡೆಸಬೇಕು ಎಂದು ಈ ನಾಯಕರು ಹೈಕಮಾಂಡ್ ಗಮನ ಸೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದ ಮದಕರಿ ನಾಯಕನ ಕೋಟೆಯಿಂದ ಬಳ್ಳಾರಿಯವರಿಗೆ ಪಾದಯಾತ್ರೆ ನಡೆಸಬೇಕು ಎನ್ನುವುದು ಒಂದು ವಾದವಾದರೆ ಬಳ್ಳಾರಿಯ ಕನಕದುರ್ಗ ದೇವಾಲಯದಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಬೇಕು ಎನ್ನುವುದು ಮತ್ತೊಂದು ವಾದವಾಗಿದೆ ಹೈಕಮಾಂಡ್ ಜೊತೆ ಚರ್ಚಿಸಿ ಸ್ಥಳ ಮತ್ತು ಕಾರ್ಯಕ್ರಮದ ರೂಪರೇಷೆ ಸಿದ್ದಪಡಿಸಲು ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ
Previous Articleಬೆಂಗಳೂರಿನಲ್ಲಿ ಹುಡುಗಿಯರೇ ಹೆಚ್ಚು ನಾಪತ್ತೆ.
Next Article ಕಾಂಗ್ರೆಸ್- ಬಿಜೆಪಿ 50:50ಸಮಾವೇಶ..!