ಬೆಂಗಳೂರು: ಇತ್ತೀಚೆಗೆ ಮದುವೆ ಕಲ್ಯಾಣ ಮಂಟಪದಲ್ಲಿಯೇ ಮುರಿದು ಬೀಳುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ ಇಂದು (ಮೇ.25) ಮದುವೆ ಮುಹೂರ್ತ ಸಮಯಕ್ಕೆ ವಧು ನಾಪತ್ತೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟಪಲ್ಲಿ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.
ನಿನ್ನೆ ರಾತ್ರಿ ನಡೆದ ಅರತಕ್ಷತೆಯಲ್ಲಿ ಭಾಗಿಯಾಗಿದ್ದ 22 ವರ್ಷದ ವಧು ಇಂದು ನಾಪತ್ತೆಯಾಗಿದ್ದಾಳೆ. ಪ್ರಿಯಕರ ಪ್ರವೀಣ್ ಜೊತೆ ಎಸ್ಕೇಪ್ ಆಗಿರುವ ಅನುಮಾನ ವ್ಯಕ್ತವಾಗಿದೆ.
ಗೌರಿಬಿದನೂರಿನ ಕರೇಕಲ್ಲಹಳ್ಳಿ ನಿವಾಸಿಯಾಗಿರುವ ಸುರೇಶ್ ಜೊತೆ ಮದುವೆ ನಿಗದಿಯಾಗಿತ್ತು. ವಧು ಗೌರಿಬಿದನೂರಿನ ನಾಗಿರೆಡ್ಡಿ ಬಡಾವಣೆಯ ನಿವಾಸಿಯಾಗಿದ್ದು ಇಂದು ಬೆಳಿಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಬೇಕಿತ್ತು. ಆದರೆ ಹುಡುಗಿ ನಾಪತ್ತೆಯಾಗಿರುವ ಕಾರಣ ಮದುವೆ ಅರ್ಧಕ್ಕೆ ನಿಂತು ಹೋಗಿದೆ.
ಪ್ರಿಯಕರ ಪ್ರವೀಣ್ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ವಧುವಿನ ಸಂಬಂಧಿಕರು ನಿರ್ಧರಿಸಿದ್ದಾರೆ.