ಧಾರವಾಡ: ನಿನ್ನೆಯಷ್ಟೆ ಕಾಳಿ ಸ್ವಾಮೀಜಿಗೆ ಮಸಿ ಬಳಿದ ಪ್ರಕರಣ ನಡೆದಿದ್ದು, ಈ ವಿಚಾರವಾಗಿ ಧಾರವಾಡದಲ್ಲಿ ಶ್ರೀರಾಮಸೇನಾ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಸ್ವಾಮೀಜಿಗಳು ಕನ್ನಡ ವಿರೋಧಿಯಾಗಿ ಮಾತಾಡಿಲ್ಲ. ನಾನು ಅವರೊಂದಿಗೆ ಮಾತಾಡಿದ್ದೇನೆ. ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗೆ ಹಾಗು ಕುವೆಂಪು ಅವರಿಗೆ ಬೈದಿದ್ದಾರೆ ಎಂದಿದೆ.
ಆದರೆ ಆ ರೀತಿ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಅಕಸ್ಮಾತ್ ಆ ರೀತಿ ಏನಾದರೂ ಇದ್ದರೆ ದಾಳಿ ಮಾಡಿದವರು ದಾಖಲೆ ಬಿಡುಗಡೆ ಮಾಡಬೇಕಿತ್ತು ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಹಲ್ಲೆ ಮಾಡಿದವರು ಕ್ಷಮೆ ಕೇಳಬೇಕು. ನಿಮಗೆ ಏನಾದರೂ ನೋವಾಗಿದ್ದರೆ ಕುಳಿತುಕೊಂಡು ಚರ್ಚೆ ಮಾಡಬಹುದು. ನಿಮಗೆ ಏನಾದರು ತಪ್ಪು ಎನಿಸಿದ್ದರೆ ಕೇಸ್ ಹಾಕಬಹುದಾಗಿತ್ತು.
ಈ ರೀತಿ ಖಾವಿಧಾರಿ ಸನ್ಯಾಸಿಗೆ ಮಸಿ ಬಳಿಯುವಂತಾದ್ದು ಅಪರಾಧವಾಗಿದ್ದು, ಈ ವಿಚಾರದಲ್ಲಿ ತಪ್ಪು ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಶ್ರೀರಾಮ ಸೇನೆ ಸಂಘಟನೆ ಖಂಡಿಸುತ್ತದೆ. ಕೂಡಲೇ ಹಲ್ಲೆ ಮಾಡಿದವರು ಕ್ಷಮೆ ಕೇಳಬೇಕು. ಯಾರೆಲ್ಲಾ ಇದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ನಾಳೆ ಇನ್ನೊಬ್ಬ ಕಾವಿಧಾರಿ ಮೇಲೆ ಕಿಡಿಗೆಡಿಗಳು ಹಲ್ಲೆ ಮುಂದುವರೆಸುತ್ತಾರೆ. ಇದನ್ನ ಹದ್ದುಬಸ್ತಿನಲ್ಲಿ ಇಡಬೇಕೆಂದು ನನ್ನ ಆಗ್ರಹವಾಗಿದೆ.