ಬೆಂಗಳೂರು,ಆ.13:
ಮತಗಳ್ಳತನ ಕುರಿತು ನೀಡಿದ ಹೇಳಿಕೆಯಿಂದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಇದೀಗ ಶಾಸಕ ಸ್ಥಾನ ತೊರೆಯಲು ಮುಂದಾಗಿದ್ದಾರೆ.
ತಮ್ಮ ಹೇಳಿಕೆಯನ್ನು ಅನಗತ್ಯ ವಿವಾದವನ್ನಾಗಿ ಮಾಡಿ ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತ್ರದ ಮೂಲಕ ತಮ್ಮನ್ನು ಮಂತ್ರಿ ಸ್ಥಾನದಿಂದ ವಜಾ ಗೊಳಿಸುವಂತೆ ಮಾಡಲಾಗಿದೆ ಎಂದು ಆಕ್ರೋಶಗೊಂಡಿರುವ ಅವರು ಇದೀಗ ಇದಕ್ಕೆ ಕಾರಣರಾದ ವ್ಯಕ್ತಿಗಳ ವಿರುದ್ಧ ಸಮರ ಘೋಷಿಸಲು ತೀರ್ಮಾನಿಸಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ನಂತರ ಅಜ್ಞಾತ ಸ್ಥಳದಲ್ಲಿ ಕುಳಿತುಕೊಂಡಿರುವ ಅವರು ಅಲ್ಲಿಂದಲೇ ತಮ್ಮ ಹಲವು ಆಪ್ತರನ್ನು ಸಂಪರ್ಕಿಸಿ ತಮ್ಮ ಈ ಸ್ಥಿತಿಗೆ ಕಾರಣರಾದ ವ್ಯಕ್ತಿಯ ವಿರುದ್ಧ ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ತಮ್ಮ ಹೇಳಿಕೆ ಅಪತ್ಯವಾಗಿದ್ದರೆ ಆ ಬಗ್ಗೆ ತಮ್ಮಿಂದ ಸ್ಪಷ್ಟನೆ ಕೇಳಬಹುದಿತ್ತು ನೋಟಿಸ್ ಕೊಡಬಹುದಿತ್ತು ಇಲ್ಲವೇ ರಾಜೀನಾಮೆ ಪಡೆದುಕೊಂಡು ಗೌರವಯುತವಾಗಿ ನಿರ್ಗಮಿಸುವಂತೆ ಮಾಡಬಹುದಿತ್ತು ಅದನ್ನು ಬಿಟ್ಟು ಸಚಿವ ಸ್ಥಾನದಿಂದ ಪದಚ್ಯುತಗೊಳ್ಳುವಂತೆ ಮಾಡುವ ಮೂಲಕ ಅಪಮಾನ ಮಾಡಿದ್ದಾರೆ ಹೀಗಾಗಿ ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಸತ್ಯ ಹೇಳುವ ನೇರ ನಡೆ-ನುಡಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆಯಿಲ್ಲ, ಇಂತಹ ಕಡೆ ಮುಂದುವರೆಯಲು ಇಚ್ಛೆ ಇಲ್ಲ ಎಂದು ರಾಜಣ್ಣ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.ಅಷ್ಟೇ ಅಲ್ಲ ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಷಯವನ್ನು ತಿಳಿದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಣ್ಣ ದುಡುಕಿನಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ಹಾಗೂ ಪಕ್ಷದಲ್ಲೇ ಉಳಿಯುವಂತೆ ಮನವೊಲಿಸಲು
ತಮ್ಮ ಆಪ್ತ ಸಚಿವರನ್ನು ನಿಯೋಜಿಸಿದ್ದಾರೆ.
ಸಚಿವ ಸ್ಥಾನದಿಂದ ವಜಾಗೊಳ್ಳುತ್ತಿದ್ದಂತೆ ರಾಜಣ್ಣ ತಮ್ಮ ಪುತ್ರನ ಮೂಲಕ ತಾವು ಪ್ರತಿನಿಧಿಸುವ ಮಧುಗಿರಿ ವಿಧಾನಸಭಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ತಲುಪಿಸುವಂತೆ ಕಳುಹಿಸಿದ್ದರು.
ವಿಧಾನ ಪರಿಷತ್ ಸದಸ್ಯರೂ ಆಗಿರುವ ರಾಜಣ್ಣ ಪುತ್ರ ಆ ಪತ್ರವನ್ನು ಸಭಾಧ್ಯಕ್ಷರಿಗೆ ನೀಡದೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ತಮ್ಮ ತಂದೆಯ ನಿರ್ಧಾರ ಮತ್ತು ಪತ್ರವನ್ನು ತಲುಪಿಸಿದರು.
ಪತ್ರ ಪಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ಸತೀಶ್ ಜಾರಕಿಹೊಳಿ, ಚಲುವರಾಯಸ್ವಾಮಿ ಹಾಗೂ ಡಾ.ಸುಧಾಕರ್ ಅವರನ್ನು ಕರೆಸಿಕೊಂಡು, ರಾಜಣ್ಣ ಪತ್ರದ ಬಗ್ಗೆ ಚರ್ಚೆ ನಡೆಸಿದರು.
ನಂತರ ಪತ್ರವನ್ನು ಜಾರಕಿಹೊಳಿ ಅವರಿಗೆ ನೀಡಿ, ನೀವು ಮೂವರೂ ರಾಜಣ್ಣ ಅವರ ಮನೆಗೆ ತೆರಳಿ ಅವರ ಮನವೊಲಿಸಿ, ದುಡುಕುವುದು ಬೇಡ, ಮುಂದೆ ಬೇರೆ ಪರಿಣಾಮಗಳು ಬೀರಬಹುದು ಎಂದು ಹೇಳಿ.
ನಾನು ಅವರ ಜೊತೆ ಮಾತನಾಡುವೆ ಎಂದು ತಿಳಿಸಿದ ನಂತರ ಸಚಿವರು, ರಾಜಣ್ಣ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಮಾಹಿತಿ ತಲುಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ನನ್ನನ್ನು ಸಂಪುಟದಿಂದ ಉಚ್ಛಾಟಿಸಲು, ಆ ಹಿರಿಯ ಮಂತ್ರಿಯೇ ಕಾರಣ, ಅಂತಹವರ ಜೊತೆ ಪಕ್ಷ ಮತ್ತು ಅಧಿವೇಶನದಲ್ಲೂ ಇರಲಾರೆ, ನನಗೆ ಯಾರ ಭಯವೂ ಇಲ್ಲ. ದೆಹಲಿಯವರ ಮುಖ ನೋಡಿ ಕ್ಷೇತ್ರದಲ್ಲಿ ನನಗೆ ಮತ ಹಾಕುವುದಿಲ್ಲ, ನಮ್ಮ ಕಾರ್ಯಕರ್ತರು, ಸ್ನೇಹಿತರು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಒಂದಷ್ಟು ವಿಷಯಗಳನ್ನು ಸಚಿವರ ಮುಂದಿಟ್ಟಿದ್ದಾರೆ.
ಡಾ.ಸುಧಾಕರ್, ಕೆಲವೊಂದು ವಿಷಯ ಪ್ರಸ್ತಾಪಿಸಿ, ರಾಜಣ್ಣ ಕೋಪ ಶಮನಗೊಳಿಸಿ, ರಾಜೀನಾಮೆ ಪತ್ರ ಹಿಂದೆ ಪಡೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.
ಇಷ್ಟಾದರೂ ರಾಜಣ್ಣ, ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ, ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆ ನಂತರ ಜನರ ಮುಂದಯೇ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ ಎಂದು ಗೊತ್ತಾಗಿದೆ.