ಬೆಂಗಳೂರು, ಸೆ.19-
ಅತ್ಯಾಚಾರ,ಬೆದರಿಕೆ, ಹನಿಟ್ರ್ಯಾಪ್ ಸಂಬಂಧ ಮಹಿಳೆಯು ನೀಡಿದ ದೂರಿನ್ವಯ ಪೊಲೀಸರು ಶಾಸಕ ಮುನಿರತ್ನ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮುನಿರತ್ನ ವಿರುದ್ಧ ಅತ್ಯಾಚಾರ,ಹನಿಟ್ರ್ಯಾಪ್ ಆರೋಪ ಮಾಡಿದ್ದ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆ ನಡೆಸಿ ಕೃತ್ಯ ನಡೆದ ಸ್ಥಳಗಳಲ್ಲಿ ಆಕೆಯ ಜೊತೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಅತ್ಯಾಚಾರ,ಹನಿಟ್ರ್ಯಾಪ್ ಆರೋಪ ಮಾಡಿ ದೂರು ನೀಡಿದ್ದ ಸಂತ್ರಸ್ತ ಮಹಿಳೆಯನ್ನು ಡಿವೈಎಸ್‌ಪಿ ದಿನಕರ್ ಶೆಟ್ಟಿ ಅವರು 2 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ.
ಘಟನೆ ಸಂಬಂಧ ಶಾಸಕ ಮುನಿರತ್ನ , ವಿಜಯ್ ಕುಮಾರ್, ಕಿರಣ್, ಲೋಹಿತ್, ಮಂಜುನಾಥ್, ಲೋಕಿ ಸೇರಿ 7 ಮಂದಿ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಜೀವ ಬೆದರಿಕೆ,ಜಾತಿ ನಿಂದನೆ ಆರೋಪದಲ್ಲಿ ಜೈಲಿನಲ್ಲಿರುವ ಶಾಸಕ ಮುನಿರತ್ನ ಸೇರಿ ಇತರ ಆರೋಪಿಗಳ ವಿರುದ್ಧ ಸೆಕ್ಷನ್ 354 ಎ, 354 ಸಿ, 376(2), 308, 406, 384, 120ಬಿ 504, 506, 149 ಐಪಿಸಿ ಅಡಿ ಕೇಸ್ ದಾಖಲಾಗಿದೆ.
ಅತ್ಯಾಚಾರ ಆರೋಪಿಗಳ ಪತ್ತೆಗಾಗಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಸಂತ್ರಸ್ತೆ ಉಲ್ಲೇಖಿಸಿರುವ ಸ್ಥಳಗಳನ್ನ ಪರಿಶೀಲಿಸುವ ವಿಶೇಷ ತಂಡ ರಚನೆಯಾಗಿದೆ. ಮತ್ತೊಂದೆಡೆ ಸಂತ್ರಸ್ಥೆ ವೈದ್ಯಕೀಯ ಪರೀಕ್ಷೆ ಮುಕ್ತಾಯಗೊಂಡಿದೆ. ಆರ್ ಆರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದಿದೆ.
ದ್ವೇಷ ಅವಶ್ಯಕತೆ ಇಲ್ಲ:
ಘಟನೆ ಸಂಬಂಧ ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿ ದೂರಿನ ಮೇಲೆ ಕಾನೂನಿನ ರೀತಿ ಕ್ರಮ ಆಗುತ್ತೆ. ಪಬ್ಲಿಕ್ ಸರ್ವೆಂಟ್ಸ್ ಈ ರೀತಿ ಮಾಡಿದ್ರೆ ಕಾನೂನಿನಡಿ ಕ್ರಮ ಇದೆ. ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮಗೆ ದ್ವೇಷದ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಜನರು ನಮ್ಮನ್ನ ಗೆಲ್ಲಿಸಿದ್ದಾರೆ, ಅದರ ಪ್ರಕಾರ ಕೆಲಸ ಮಾಡ್ತಿದ್ದೇವೆ ಎಂದರು.