ಬೆಂಗಳೂರು,ಸೆ.21-ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಿಸಿರುವ ಅತ್ಯಾಚಾರ,ಹನಿಟ್ರ್ಯಾಪ್ ಷಡ್ಯಂತ್ರ,ಬೆದರಿಕೆ ಇನ್ನಿತರ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಬಿಜಯಕುಮಾರ್ (ಬಿ.ಕೆ) ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಸೇರಿ ಇನ್ನಿತರ ಪ್ರಕರಣಗಳ ತನಿಖೆಯನ್ನು ಬಿ.ಕೆ. ಸಿಂಗ್ ನೇತೃತ್ವದ ಎಸ್ ಐಟಿ ಕೈಗೊಂಡು ಆರೋಪಪಟ್ಟಿಗಳನ್ನು ಸಲ್ಲಿಕೆ ಮಾಡಿರುವ ಬೆನ್ನಲ್ಲೇ ಶಾಸಕ ಮುನಿರತ್ನ ಪ್ರಕರಣ ತನಿಖೆಗೆ ಅವರ ನೇತೃತ್ವದಲ್ಲೇ ತನಿಖಾ ತಂಡ ರಚನೆ
ಮಾಡಲಾಗಿದೆ.ಆದರೆ ತನಿಖಾ ಇನ್ನೂ ಕೆಳ ಹಂತದ ಅಧಿಕಾರಿಗಳನ್ನು ನೇಮಕ ಮಾಡಿಲ್ಲ.
ಮತ್ತೆ ಮುನಿರತ್ನ ಜೈಲಿಗೆ:
ಈ ನಡುವೆ ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಇಂದು ಆದೇಶ ನೀಡಿದೆ.
ಇದರೊಂದಿಗೆ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಮೂರು ದಿನಗಳ ಹಿಂದೆ ಜಾಮೀನು ಪಡೆದು ನಿನ್ನೆ ಬಿಡುಗಡೆಯಾಗಿದ್ದರು.ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡು ಬಂಧನ ಮಾಡಲಾಗಿತ್ತು.