ಬೆಂಗಳೂರು,ಜ.24:
ಗ್ರಾಮೀಣ ಪ್ರದೇಶದಲ್ಲಿ ಸಾಲ ವಸೂಲಾತಿ ಹೆಸರಿನಲ್ಲಿ ದೌರ್ಜನ್ಯವೆಸಗುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿಗೆ ನಿಯಮಬಾಹಿರ ಕ್ರಮಗಳನ್ನು ಕೈಗೊಳ್ಳದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಟ್ಟಪ್ಪಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿ ನಲ್ಲಿ ಸಾಲ ವಸೂಲಾತಿಗೆ ಹಾಗೂ ಸಾಲ ಕೊಟ್ಟವರ ರಕ್ಷಣೆಗೆ ಸ್ಪಷ್ಟ ನಿಯಮಾವಳಿಗಳಿವೆ. ಆದರೆ ಅವು ಸಾಲುತ್ತಿಲ್ಲ ಎಂಬ ಟೀಕೆಗಳು ಇವೆ. ಇದರ ಬಗ್ಗೆ ಕಾನೂನಿನ ತಿದ್ದುಪಡಿಯ ಪರಿಶೀಲನೆ ನಡೆಸಲಾಗುವುದು ಎಂದರು.
ಸಾಲ ಕೊಡುವಾಗ ಹಲವಾರು ಕಡೆ ಸಹಿ ಮಾಡಲಾಗಿರುತ್ತದೆ. ಅಷ್ಟು ಸಹಿಗಳನ್ನು ಏಕೆ ಮಾಡಲಾಗಿದೆ ಎಂದು ಸಾಲ ತೆಗೆದುಕೊಳ್ಳುವವರಿಗೆ ತಿಳಿದಿರುವುದಿಲ್ಲ. ಸಾಲ ಕೊಡುವವರು ಕೆಲವು ಆಸ್ತಿಗಳನ್ನು ಅಡಮಾನ ಮಾಡಿಕೊಂಡಿರುತ್ತಾರೆ. ಅದರಮೇಲೆ ಮನೆಗಳ ಮೇಲೆ ದಾಳಿ ಹಾಗೂ ಜಪ್ತಿ ಮಾಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದಕ್ಕೆ ಕಾನೂನು ಮೂಲಕವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಈಗಾಗಲೇ ಕಾನೂನು ಸಚಿವರು ಅಗತ್ಯ ತಿದ್ದುಪಡಿಗೆ ಮುಂದಾಗಿದ್ದಾರೆ ಎಂದರು.
ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ನಿಂದ ಕಿರುಕುಳವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳಂತೂ ಬಂದಿವೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಮುಖ್ಯಮಂತ್ರಿಯವರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಯಾವ ರೀತಿಯ ಪ್ರಕರಣಗಳು ದಾಖಲಾಗಿವೆ, ಎಷ್ಟು ಕಿರುಕುಳ ಪ್ರಕರಣಗಳಿವೆ, ಕಾನೂನು ಬದಲಾವಣೆ ಯಾವ ರೀತಿ ಆಗಬೇಕು ಎಂಬ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.