ಬೆಂಗಳೂರು Aug. 29 :
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ಪೂರ್ಣಗೊಂಡಿದ್ದು, ನೂತನ ಅಧ್ಯಕ್ಷರ ನೇಮಕಾತಿ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಡುವೆ ಮತ್ತೊಂದು ಸುತ್ತಿನ ಜಟಾಪಟಿ ಆರಂಭಗೊಂಡಿದೆ.
ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ನಂತರ ಹೆಚ್ಚು ಕ್ರಿಯಾಶೀಲರಾಗಿರುವ ಯಡಿಯೂರಪ್ಪ ಪ್ರಧಾನಿ ಸೇರಿದಂತೆ ಪಕ್ಷದ ಎಲ್ಲಾ ವರಿಷ್ಠ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ.
ಈ ವೇಳೆ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಅಥವಾ ಮಾಜಿ ಮಂತ್ರಿ ಅರವಿಂದ ಲಿಂಬಾವಳಿ ಅವರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಮಾಜಿ ಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೆಸರು ಪ್ರಸ್ತಾಪಿಸಲ್ಪಟ್ಟಿರುವುದಾಗಿ ಕೇಳಿದ್ದೇನೆ.ಆದರೆ ಈ ಹುದ್ದೆಗೆ ಅವರು ಸೂಕ್ತರಲ್ಲ ಎಂದು ಜೆ.ಪಿ.ನಡ್ಡಾ ಮತ್ತು ಪ್ರಧಾನಿ ಮೋದಿ ಅವರಲ್ಲಿ ಹೇಳಿದ್ದಾರೆಂದು ಗೊತ್ತಾಗಿದೆ.
ಸಿ.ಟಿ.ರವಿ ಇನ್ನೂ ಆ ಎತ್ತರಕ್ಕೆ ಬೆಳೆದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಬದಲಿಗೆ ಗುಂಪುಗಾರಿಕೆಯಲ್ಲಿ ನಿಸ್ಸೀಮರು ಹೀಗಾಗಿ ಅವರ ಬದಲಿಗೆ ಲಿಂಬಾವಳಿ ಅಥವಾ ಶೋಭಾ ಸೂಕ್ತ ಎಂದು ವಿವರಿಸಿರುವುದಾಗಿ ತಿಳಿದುಬಂದಿದೆ.
ಮತ್ತೊಂದೆಡೆ ಸಿ.ಟಿ.ರವಿ ಅವರ ಬಗ್ಗೆ ಬಹುತೇಕ ಇದೇ ಅಭಿಪ್ರಾಯ ಹೊಂದಿರುವ ಬಿ.ಎಲ್.ಸಂತೋಷ್ ಯಥಾಸ್ಥಿತಿ ಮುಂದುವರೆಸಲು ವಾದ ಮಂಡಿಸಿದ್ದಾರೆ.
ಮತ್ತೊಂದೆಡೆ ಬಿ.ಎಲ್.ಸಂತೋಷ್ ಅವರ ಅನುಯಾಯಿಗಳು ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತಿದೆ ಅಲ್ಲಿಯವರೆಗೆ ನಳಿನ್ ಕುಮಾರ್ ಕಟೀಲ್ ಅಧಿಕಾರ ಅವಧಿ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ.
ನಳಿನ್ ಕುಮಾರ್ ಕಟೀಲು ಅವರು 21 ಬಾರಿ ರಾಜ್ಯ ಪ್ರವಾಸ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಚುನಾವಣಾ ವರ್ಷದಲ್ಲಿ ಅವರನ್ನು ಏಕೆ ಬದಲಾಯಿಸಬೇಕು? ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಅರನ್ನು ಪಕ್ಷದ ಅಧ್ಯಕ್ಷರನ್ನಾಗಿ ಉಳಿಸಿಕೊಳ್ಳಬೇಕು ಎಂದು ವಾದಿಸುತ್ತಿದ್ದಾರೆ.
ಈ ನಡುವೆ ಕಟೀಲ್ ತಾವು ಪಕ್ಷದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಮಾಡಿದ ಸಾಧನೆಗಳ ಬಗ್ಗೆ ಜಾಹಿರಾತು ನೀಡಿದ್ದು ಅದರಲ್ಲಿ ಹಿರಿ-ಕಿರಿಯ ನಾಯಕರ ಪೋಟೋ ಹಾಗೂ ಅಭಿಪ್ರಾಯ ಉಲ್ಲೇಖವಿದೆ. ಆದರೆ ಯಡಿಯೂರಪ್ಪ ಅವರ ಪೋಟೋ ಅಥವಾ ಯಾವುದೇ ಹೇಳಿಕೆ ಉಲ್ಲೇಖಿಸಿಲ್ಲ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎನ್ನಲಾಗುತ್ತಿದೆ.
Previous Articleಪೊಲೀಸ್ ಸರ್ಪಗಾವಲಿನಲ್ಲಿ ಮುರುಘಾ ಶರಣರು..
Next Article ತಾತನ ಅಂತ್ಯಸಂಸ್ಕಾರಕ್ಕೆ ನೀರಿನಲ್ಲಿ ನಡೆದು ಬಂದ ಬಾಣಂತಿ