ಬೆಂಗಳೂರು:
ನಾಯಕತ್ವ ಕುರಿತಂತೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ತೀವ್ರಗೊಂಡಿರುವ ನಡುವೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೈಗೊಂಡಿರುವ ತೀರ್ಮಾನ ಉನ್ನತ ವಲಯದಲ್ಲಿ ಮತ್ತೊಂದು ಸುತ್ತಿನ ಅಸಮಧಾನಕ್ಕೆ ಕಾರಣವಾಗಿದೆ.
ಪಕ್ಷ ರಾಜಕಾರಣದ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರಿಗೆ ಸಂಘಟನಾತ್ಮಕ ವಿಷಯಗಳ ಕುರಿತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತದೊಂದಿಗೆ ಸಭೆ ಸಮಾಲೋಚನೆ ನಡೆಸಲು ಸಂಪೂರ್ಣ ಅಧಿಕಾರವಿದೆ ಅದೇ ರೀತಿ ಶಾಸನಸಭೆಯ ಕಾರ್ಯಕಲಾಪಗಳು ಚರ್ಚೆಯ ವಿಧಾನಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಲಾಗಿದೆ.
ಶಾಸಕಾಂಗ ವಿಚಾರದ ಕುರಿತು ಸಭೆ ಮತ್ತು ಸಮಾಲೋಚನೆ ನಡೆಸಲು ಶಾಸಕಾಂಗ ಪಕ್ಷದ ನಾಯಕರ ಸೂಚನೆಯ ಮೇರೆಗೆ ಶಾಸಕಾಂಗ ಕಾರ್ಯದರ್ಶಿ ಶಾಸಕಾಂಗ ಸಭೆ ಕರೆಯುತ್ತಾರೆ. ಇಲ್ಲಿ ಪಕ್ಷದ ಅಧ್ಯಕ್ಷರು ಶಾಸಕರಲ್ಲದೆ ಹೋದರೂ ಕೂಡ ಆಹ್ವಾನಿಕರಾಗಿ ಶಾಸಕಂಗ ಸಭೆಗೆ ಹಾಜರಾಗಬಹುದು.
ಒಟ್ಟಾರೆ ಶಾಸಕಾಂಗ ಸಭೆ ಕರೆಯಲು ಪರಮಾಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ಮೀಸಲು. ಇಂತಹ ಅಧಿಕಾರವನ್ನು ಈಗ ವಿಜಯೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಾರ್ಚ್ 3ರಿಂದ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ತಂತ್ರಗಾರಿಕೆ ನಡೆಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಫೆ. 20, 21ರಂದು ಸಭೆ ಕರೆಯಲಾಗಿದೆ. ಈ ಮೂಲಕ ಶಾಸಕರ ವಲಯದಲ್ಲೂ ತಮ್ಮ ಪ್ರಭಾವ ಬಿಗಿ ಮಾಡಿಕೊಳ್ಳುವುದಕ್ಕೆ ವಿಜಯೇಂದ್ರ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಅಧಿವೇಶನದ ಸಿದ್ಧತೆ ಬಗ್ಗೆ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಆದರೆ ಈ ಬಾರಿ ರಾಜ್ಯಾಧ್ಯಕ್ಷರೇ ಮುಂದಡಿ ಇಟ್ಟಿದ್ದು, ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣ ಸ್ವಾಮಿಗೂ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ವಿಜಯೇಂದ್ರ ಅವರ ಈ ನಡೆಗೆ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಇದನ್ನು ಹೈಕಮಾಂಡ್ ಗಮನಕ್ಕೆ ತರಲು ಕೂಡ ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Previous Articleಯಾರೇ.. ಕೂಗಾಡಲಿ…
Next Article ಬ್ಯಾಂಕ್ ಲಾಕರ್ ನಲ್ಲಿಟ್ಟ ಹಣಕ್ಕೆ ಹೀಗಾದರೆ ಯಾರು ಹೊಣೆ