ಬೆಂಗಳೂರು,ಏ.28:
ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಲೋಕ್ ಮೋಹನ್ ಅವರು ಸೇವಾ ನಿವೃತ್ತಿ ಹೊಂದುತ್ತಿದ್ದು, ಅವರ ಸ್ಥಾನಕ್ಕೆ ಸರ್ಕಾರ ಯಾರನ್ನು ನೇಮಕ ಮಾಡಲಿದೆ ಎಂಬ ವಿಚಾರ ಇದೀಗ ಕುತೂಹಲ ಮೂಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ನೇಮಕವಾಗುವ ವ್ಯಕ್ತಿ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಬೇಕು. ಆದರೆ ಅಲೋಕ್ ಮೋಹನ್ ಅವರು 21 ತಿಂಗಳು ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಹೀಗಾಗಿ ತಮ್ಮ ಸೇವಾ ಅವಧಿಯನ್ನು ಮತ್ತೆ ಮೂರು ತಿಂಗಳ ಅವಧಿಯವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮತ್ತು ಯುಪಿಎಸ್‌ಸಿಗೆ ರವಾನಿಸಿದೆ. ಆದರೆ ಇಲ್ಲಿಯವರೆಗೆ ಈ ಪ್ರಸ್ತಾವನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಹೀಗಾಗಿ ಹೊಸವರನ್ನು ನೇಮಕ ಮಾಡುವ ಅನಿವಾರ್ಯತೆ ಉಂಟಾಗಿದೆ.
ಸರಕಾರ ಹೊಸ ಡಿಜಿಪಿ ನೇಮಕ ಪ್ರಕ್ರಿಯೆಯನ್ನೂ ಆರಂಭಿಸಿದ್ದು, ನಿಯಮದಂತೆ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಯಾಗಿರುವ ಡಾ.ಎಂ.ಎ.ಸಲೀಂ, ಪೊಲೀಸ್ ಗೃಹ ನಿರ್ಮಾಣ ವಿಭಾಗದ ಡಿಜಿಯಾಗಿರುವ ರಾಮಚಂದ್ರ ರಾವ್, ಸಿಐಡಿ ಸೈಬರ್ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಇದಕ್ಕೆ ಇನ್ನೆರಡು ದಿನಗಳಲ್ಲಿ ಕೇಂದ್ರ ದಿಂದ ಪ್ರತಿಕ್ರಿಯೆ ಬರಲಿದ್ದು, ಆನಂತರ ಸರಕಾರ ತನ್ನ ವಿವೇಚನಾಧಿಕಾರ ಬಳಸಿ ಮುಂದಿನ ಆಡಳಿತಕ್ಕೆ ಪೂರಕವಾದ ಹಿರಿಯ ಅಧಿಕಾರಿಯನ್ನು ಡಿಜಿಪಿಯಾಗಿ ನೇಮಕ ಮಾಡಲಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸರಕಾರದ ಆಯ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ.
ಈ ನಡುವೆ ರಾಜ್ಯ ಸರ್ಕಾರ ಸಿಐಡಿ ಮುಖ್ಯಸ್ಥರಾಗಿರುವ ಸಲೀಂ ಅವರನ್ನು ಈ ಹುದ್ದೆಗೆ ನೇಮಕ ಮಾಡಲು ವಿಶೇಷ ಆಸಕ್ತಿ ಹೊಂದಿದೆ ಆದರೆ ಸೇವಾ ಹಿರಿತನವನ್ನು ಪಾಲಿಸಲೇಬೇಕು ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಅನುಸರಿಸಿದರೇ ಸಲೀಂ ಅವರು ಈ ಹುದ್ದೆಗೆ ನೇಮಕವಾಗುವುದು ಅನುಮಾನ.
ಸದ್ಯ ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿರುವ ಪ್ರಶಾಂತ ಠಾಕೂರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಸರಿ ಸಮಾನದ ಇನ್ನೊಂದು ಹುದ್ದೆಗೆ ನೇಮಕಗೊಳ್ಳಲು ಒಪ್ಪಿಗೆ ಸೂಚಿಸಿದರೆ ಮಾತ್ರ ಸಲೀಂ ಅವರಿಗೆ ಈ ಹುದ್ದೆ ಸಿಗಲಿದೆ ಇಲ್ಲವಾದರೆ ಹೀಗಿರುವ ಹುದ್ದೆಯಲ್ಲಿ ಸಲೀಂ ಅವರು ಮುಂದುವರಿಯಬೇಕಾಗುತ್ತದೆ.
