ಬೆಂಗಳೂರು,ಸೆ.9-
ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ಸರ್ವೇಸಾಮಾನ್ಯ ಆದರೆ ಇದೀಗ ಈ ಸಾಲಿಗೆ ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿ ಸೇರ್ಪಡೆಯಾಗಿದ್ದಾರೆ.
ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸಭೆಯ ಅಧ್ಯಕ್ಷರಾಗಿ ಯುಟಿ ಖಾದರ್ ತಾವು ಅತ್ಯಂತ ಉನ್ನತ ಸ್ಥಾನದಲ್ಲಿದ್ದೇನೆ ಎಂದುಕೊಂಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗೆ ಸಮಾನ ಅಧಿಕಾರ ಮತ್ತು ಗೌರವಗಳಿವೆ ಅದನ್ನು ಮರೆತವರಂತೆ ಇವರು ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನ ಸಭೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ನನ್ನ ಅಭಿಪ್ರಾಯ ಹಾಗೂ ತಮ್ಮ ಅಭಿಪ್ರಾಯವು ಆಗಿದೆ ಎಂದು ಭಾವಿಸಿರುತ್ತೇನೆ.
ದ್ವಿಸದನ ಇರುವ ರಾಜ್ಯದಲ್ಲಿ ವಿಧಾನ ಮಂಡಲದಿಂದ ನಡೆಯುವ ಸಚಿವಾಲಯದ ಕಛೇರಿ ಕಾರ್ಯಕ್ರಮಗಳು ಸಹ ಇದೇ ದೃಷ್ಟಿಯಲ್ಲಿ ಹಾಗೂ ದಿಕ್ಕಿನಲ್ಲಿ ಸಾಗಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನ್ನನ್ನು ಸೌಜನ್ಯಕ್ಕಾದರು ಅಧಿಕೃತ ಕಾರ್ಯಕ್ರಮದ ಬಗ್ಗೆ ರೂಪರೇಷಗಳನ್ನು ಸಿದ್ಧಪಡಿಸಲು ಸಂಪರ್ಕಿಸದೆ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಉದಾಹರಣೆಗೆ ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ತಾವು ಪುಸ್ತಕ ಮೇಳವನ್ನು ಆಯೋಜಿಸಿದ್ದು, ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಯೋಜನೆ, 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್, ಭಾರತ ವಲಯದ ಸಮ್ಮೇಳನ ಆಯೋಜನೆ ಬಗ್ಗೆ ಮೇಲಿನ ಕಾರ್ಯಕ್ರಮಗಳ ರೂಪರೇಷೆಗಳನ್ನು ಮಾಡುವಲ್ಲಿ ನನ್ನನ್ನು ಸೌಜನ್ಯಕ್ಕಾದರು ಸಂಪರ್ಕಿಸಿ ಸಲಹೆ ಸೂಚನೆ ಕೇಳದೆ ಮುಂದುವರೆದು ಸದರಿ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಗೋಷ್ಠಿಯನ್ನು ಏಕಪಕ್ಷಿಯವಾಗಿ ನಡೆಸುತ್ತಿರುವುದು ನಾನು ಮಾಧ್ಯಮಗಳ ಮೂಲಕ ಗಮನಿಸಿರುವೆ.
ಇದರ ಪರಿಣಾಮವಾಗಿ ನನ್ನ ಸುದೀರ್ಘ ರಾಜಕೀಯ ಹಿನ್ನಲೆ ಹಾಗೂ ಅನ್ಯ ರಾಜ್ಯಗಳ ಪೀಠಾಸೀನಾಧಿಕಾರಿಗಳ ನಿಕಟ ಸಂಪರ್ಕದಿಂದ ಹೊರ ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಪೀಠಾಸೀನಾಧಿಕಾರಿಗಳು, ಶಾಸಕರು ಹಾಗೂ ಗಣ್ಯರುಗಳೊಂದಿಗೆ 11 ನೇ ಸಿಪಿಎ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್‌ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹಾಗೂ ಆತ್ಮೀಯ ಮಾಹಿತಿ ವಿನಿಮಯ ಮಾಡುವಲ್ಲಿ ಮುಜುಗರ ಉಂಟಾಗುತ್ತಿದೆ.
ಇತ್ತೀಚೆಗೆ ತಾವು ಬಾರ್ಬಡೊಸ್ ನಲ್ಲಿ ನಡೆಯುವ ಕಾಮನ್‌ವೆಲ್ತ್ ಕಾನ್ಸರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 21 ದಿನಗಳ ಅಧಿಕೃತ ಪ್ರವಾಸ ಪಟ್ಟಿಯನ್ನು ನನ್ನ ಸಲಹೆಯನ್ನು ಪಡೆಯದೆ ತಾವು ತಯಾರಿಸಿದ್ದು ಅನ್ಯ ಮೂಲಗಳಿಂದ ತಿಳಿದಿರುವುದು ಅತ್ಯಂತ ಖೇಧಕರ ಸಂಗತಿಯಾಗಿದೆ.
ನಾನು ಅಧಿಕೃತ ಕಾರ್ಯಕ್ರಮದಲ್ಲಿ ಅಧ್ಯಯನ ಪ್ರವಾಸ ಯಾವ ದೇಶಕ್ಕೆ ಹೋಗಬೇಕು ಎಂದು ನಿರ್ಧರಿಸುವ ಹಕ್ಕು ಇಲ್ಲವೆಂದು ಭಾಸವಾಗುತ್ತಿದೆ. ನಿಮಗೆ ಅನುಕೂಲವಾಗುವ ರೀತಿ ಕಾರ್ಯಕ್ರಮವನ್ನು ನಿರೂಪಿಸಿ ಒತ್ತಾಯ ಪೂರ್ವಕವಾಗಿ ನಾನು ಅದರಲ್ಲಿ ಭಾಗವಹಿಸುವಂತೆ ಮಾಡುವ ಸಂದಿಗ್ಧತೆಯ ಅವಶ್ಯಕತೆ ಏನು ಎನ್ನುವುದು ನನಗೆ ಒಗಟಾಗಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ 3116
Previous Articleಭದ್ರಾವತಿಯಲ್ಲಿ ಕಿಡಿಗೇಡಿಗಳ ಕಿತಾಪತಿ.
Next Article CCB ಹೆಸರಲ್ಲಿ ಪೊಲೀಸ್ ಪೇದೆ ಸುಲಿಗೆ.