ಬೆಂಗಳೂರು,ಮೇ. 28:
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ಸಿನ ಬೆನ್ನಲ್ಲೇ ರಾಜ್ಯ ಸರ್ಕಾರ ಯೋಧರ ಬೆಂಬಲಕ್ಕೆ ಧಾವಿಸಿದೆ.
ರಾಜ್ಯದಲ್ಲಿರುವ ಎಲ್ಲಾ ಮಾಜಿ ಯೋಧರಿಗೆ ನೆರವಾಗಲು ಪ್ರತ್ಯೇಕ ನಿಗಮ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಆಯೋಜಿಸಿದ್ದ ಹಿಂದ್ ಸಭಾ ಕಾರ್ಯಕ್ರಮದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಹಿರಿಯ ಸೇನಾಧಿಕಾರಿಗಳು ಹಾಗೂ ಮಾಜಿ ಯೋಧರು, ಹುತಾತ್ಮರಾದ ಯೋಧರ ಕುಟುಂಬ ಸದಸ್ಯರನ್ನು ಸನ್ಮಾನಿಸಿದ ನಂತರ ಮಾತನಾಡಿದ ಅವರು,ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸೈನಿಕರ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರ ಸಲಹೆ ಮೇರೆಗೆ ಯೋಧರ ಅಭಿವೃದ್ಧಿ ನಿಗಮ ರಚಿಸಲು ಆಲೋಚಿಸುತ್ತಿದ್ದೇವೆ. ನಮ್ಮ ದೇಶಕ್ಕೆ ಸೇವೆ ಸಲ್ಲಿಸಿರುವ ಯೋಧರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು
ಇಂತಹ ಅತ್ಯಂತ ಮಹತ್ವದ ಕಾರ್ಯಕ್ರಮದ ಭಾಗವಾಗಿರುವುದು ಹೆಮ್ಮೆಯ ವಿಚಾರ. ದೇಶಕ್ಕೆ ಶಕ್ತಿ ತುಂಬಿರುವ ನಿಮ್ಮಲ್ಲರಿಗೆ ದೇಶ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷ ಸದಾ ದೇಶ ಹಾಗೂ ನಮ್ಮ ಸಶಸ್ತ್ರ ಪಡೆಗಳ ಪರವಾಗಿ ನಿಲ್ಲಲಿದೆ. ನಿಮ್ಮ ಕೊಡುಗೆಯನ್ನು ಸದಾ ಸ್ಮರಿಸಲಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಸೇನಾಧಿಕರಿಗಳು ಹಾಗೂ ಮಾಜಿ ಯೋಧರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇನ್ನು ದೇಶ ಸೇವೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬ ಸದಸ್ಯರಿಗೆ ಸನ್ಮಾನ ಸಲ್ಲಿಸಿದರು.
ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್ ಜೋಜನ್ ಥಾಮಸ್, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಎಂ.ಸಿ ಮುತ್ತಣ್ಣ, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಗಣೇಶ್ ಮದ್ದಪ್ಪ, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಎಂ.ಸಿ ಮುತ್ತಣ್ಣ, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ಎಂ.ವಿ ಪಂಜಲ್, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಮೋಹನ್ ಗಂಗಾಧರನ್, ಮೇಜರ್ ಶಫೀಕ್ ಮೊಹಮದ್ ಖಾನ್, ಸೇನಾ ಪದಕ ಪುರಸ್ಕೃತ ಕರ್ನಲ್ ರಾಮಮೂರ್ತಿ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.
Previous Articleಇಂಧನ ಮಂತ್ರಿ ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ವ್ಯರ್ಥಾಲಾಪ.
Next Article ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಬೇಡಿ.
