ಬೆಂಗಳೂರು,ಜೂ.28-
ಕಿತ್ತೂರು ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹದಾಯಿ ಯೋಜನೆ ಜಾರಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಲು ಅನುಮತಿ ದೊರಕಿಸಿಕೊಡಲು ಪ್ರಯತ್ನಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಕೇಂದ್ರ ಸಚಿವರು ಮತ್ತು ನೂತನ ಸಂಸದ ರಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆ ಸೇರಿದಂತೆ ರಾಜ್ಯದ ಹಲವು ಯೋಜನೆಗಳಿಗೆ ಕೇಂದ್ರದ ನೆರವು ದೊರಕಿಸಿ ಕೊಡುವ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಕುರಿತಂತೆ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಅವರು ಈ ಕುರಿತಾದ ಬೇಡಿಕೆಗಳ ಪಟ್ಟಿಯನ್ನು ಅವರಿಗೆ ಹಸ್ತಾಂತರಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಮಹದಾಯಿ ಕುಡಿಯುವ ನೀರಿನ ಯೋಜನೆ 2018ರಲ್ಲಿ ಇತ್ಯರ್ಥವಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇದೆ ನಿನ್ನೆ ಸಭೆಗೂ ಮುನ್ನಾ ಕೇಂದ್ರ ಸಚಿವರು ನೀಡಿರುವ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅದು ತಪ್ಪು ಮಾಹಿತಿ ಎಂದು ಹೇಳಿದರು
ವಿವಾದ ಕುರಿತು ನ್ಯಾಯಾಧೀಕರಣದ ತೀರ್ಪು ನೀಡಿದೆ, ಅದು ಅಧಿಸೂಚನೆಯೂ ಆಗಿದೆ. ಅದರ ಆಧಾರದ ಮೇಲೆ ನಾವು ಮಹದಾಯಿ ಯೋಜನೆಗೆ ವಿಸ್ತ್ರ ಯೋಜನಾ ವರದಿ ಸಿದ್ದಪಡಿಸಿ, ಟೆಂಡರ್ ಕರೆದಿದ್ದೇವೆ.ಅದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ಅದಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ಇದೆ ಎಂದು ನೆಪ ಹೇಳಬೇಡಿ ಕೇಂದ್ರದಿಂದ ಅನುಮತಿ ಕೊಡಿಸಿ ಎಂದು ಕೇಂದ್ರ ಸಚಿವರು ಹಾಗೂ ಸಂಸದರದಲ್ಲಿ ಮನವಿ ಮಾಡಿದ್ದೇವೆ ಎಂದರು.
ಭದ್ರಾ ಮೇಲ್ಡಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದು,5300 ಕೋಟಿ ನೀಡುವುದಾಗಿ 2023-24ರ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿದ್ದರು. ಹಣ ಬಿಡುಗಡೆಯಾಗಿಲ್ಲ. ರಾಜ್ಯದಿಂದ ತಾಂತ್ರಿಕ ಸಮಸ್ಯೆ ಇದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆ ರೀತಿ ಸಮಸ್ಯೆ ಇದೆ ಎಂದು ಈವರೆಗೂ ನಮಗೆ ಹೇಳಿರಲಿಲ್ಲ ಎಂದು ತಿಳಿಸಿದರು.
ಅಸಲಿಗೆ ಯಾವುದೇ ಸಮಸ್ಯೆಯೂ ಇಲ್ಲ. ಹಣ ಬಿಡುಗಡೆ ಮಾಡುವಂತೆ ನಾವು ಪತ್ರ ಬರೆದಿದ್ದೇವೆ. ಹಣ ಸಿಗಲಿದೆ ಎಂಬ ಆಶಾಭಾವನೆ ಇದೆ. ಅದೇ ರೀತಿಕೃಷ್ಣ ನ್ಯಾಯಾಧೀಕರಣ ತೀರ್ಪಿನ ಅಧಿಸೂಚನೆಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಆಗ್ರಹಿಸಿದ್ದೇವೆ ಎಂದು ಹೇಳಿದರು
ಕಾವೇರಿ ನದಿ ನೀರಿನ ವಿವಾದ ಈಗಾಗಲೇ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗಿದೆ. ತೀರ್ಪಿನಂತೆ ತಮಿಳುನಾಡಿಗೆ ಸಾಮಾನ್ಯ ವರ್ಷದಲ್ಲಿ 179 ಟಿಎಂಸಿ ನೀರು ಹರಿಸಲು ಕರ್ನಾಟಕ ಒಪ್ಪಿಕೊಂಡಿದೆ.
ಹೆಚ್ಚುವರಿ ನೀರಿನ ಸಂಗ್ರಹಕ್ಕೆ ನಮ ನೆಲದಲ್ಲಿ ನಮ ಹಣದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ನಾವು ಯೋಜನೆ ರೂಪಿಸಿದ್ದೇವೆ. ತಮಿಳುನಾಡು ರಾಜಕೀಯ ಕಾರಣಕ್ಕೆ ತಕರಾರು ತೆಗೆದು ಸುಪ್ರೀಕೋರ್ಟ್ ಮೊರೆ ಹೋಗಿದೆ. ಆದರೂ ಯಾವ ನ್ಯಾಯಾಲಯದಲ್ಲೂ ತಡೆಯಾಜ್ಞೆ ಇಲ್ಲ. ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕಿದೆ ಎಂದು ವಿವರಿಸಿದರು.