ರಾಜ್ಯಪಾಲರನ್ನು ಒತ್ತಡಕ್ಕೆ ಸಿಲುಕಿಸಿದ ಸರ್ಕಾರ.
ಬೆಂಗಳೂರು, ಆ.22:
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲರಿಗೆ ರಾಜ್ಯ ಸರ್ಕಾರ ಇದೀಗ ತಿರುಗೇಟು ನೀಡಿದೆ.
ಮುಖ್ಯಮಂತ್ರಿ ವಿರುದ್ಧ ಕೈಗೊಂಡ ತೀರ್ಮಾನದ ಮಾದರಿಯಲ್ಲಿಯೇ ರಾಜ್ಯಪಾಲರು ತಮ್ಮ ಮುಂದೆ ಇರುವ ಇತರೆ ಪ್ರಕರಣಗಳ ಕುರಿತಂತೆಯೂ ತೀರ್ಮಾನ ಕೈಗೊಳ್ಳಲು ಒತ್ತಾಯಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಗಣಿ ಗುತ್ತಿಗೆ ಅನುಮತಿ ಆರೋಪ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣ, ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಸಲಹೆಯನ್ನು ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಈ ವಿಷಯವಾಗಿ ಸುಧೀರ್ಘ ಚರ್ಚೆ ನಡೆಸಿದ ಸಂಪುಟ ಸಭೆಯಲ್ಲಿ, ಸಂವಿಧಾನದ ಆರ್ಟಿಕಲ್ 163 ರ ಅನ್ವಯ ಸಂಪುಟದ ಅಧಿಕಾರವನ್ನು ಬಳಸಿಕೊಂಡು ಈ ನಿರ್ಧಾರ ಕೈಗೊಂಡಿದೆ
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್, ರಾಜ್ಯಪಾಲರ ಮುಂದೆ ಭ್ರಷ್ಟಾಚಾರ ತಡೆ ಕಾಯ್ದೆ 1980 ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿದ್ದ ಪ್ರಾಸಿಕ್ಯೂಷನ್ ಅನುಮತಿ ಅರ್ಜಿ ಬಾಕಿ ಇದೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಎಚ್ ಡಿ ಕುಮಾರಸ್ವಾಮಿ ಹಾಗೂ ಜನಾರ್ಧನ ರೆಡ್ಡಿ ವಿರುದ್ಧದ ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಲಾಗಿದೆ. ಆದರೆ ರಾಜ್ಯಪಾಲರು ಇಲ್ಲಿಯವರೆಗೆ ತೀರ್ಮಾನ ಕೈಗೊಂಡಿಲ್ಲ ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಆರ್ಟಿಕಲ್ 163 ಅನ್ವಯ ನೆರವು ಹಾಗೂ ಸಲಹೆ ನೀಡುವ ಸಂಪುಟ ಅಧಿಕಾರವನ್ನು ಬಳಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದರು. ಈ ಬಗ್ಗೆ ತರಾತುರಿಯಲ್ಲಿ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಈ ನಾಲ್ಕು ಪ್ರಕರಣದಲ್ಲಿ ತನಿಖೆ ಆಗಿದೆ ಹಾಗೂ ಎರಡು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದರೂ ಏನೂ ಕ್ರಮ ಆಗಿಲ್ಲ. ಹೀಗಿರುವಾಗ ಕ್ಯಾಬಿನೆಟ್ ಈ ಸಲಹೆ ಕೊಡುವುದು ಸೂಕ್ತ ಎಂದರು
ಕುಮಾರಸ್ವಾಮಿ ಸೇರಿದಂತೆ ಇತರರ ವಿರುದ್ಧದ ಪ್ರಕರಣಗಳ ತನಿಖೆಗೆ ಅನುಮತಿ ಕೋರಿರುವ ಕಡತ ರಾಜ್ಯಪಾಲರ ಬಳಿ ಇರುವ ಹಿನ್ನೆಲೆಯಲ್ಲಿ ಶೀಘ್ರವೇ ಅನುಮತಿ ಪಡೆದುಕೊಳ್ಳುವಂತೆ ವಿವಿಧ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು ಹೀಗಾಗಿ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ ಇದರಲ್ಲಿ ಯಾವುದೇ ರೀತಿಯ ದ್ವೇಷದ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು