ಬೆಂಗಳೂರು:
ಅಲ್ಪ ಸಂಖ್ಯಾತ ಸಮುದಾಯದ ಗುತ್ತಿಗೆದಾರರಿಗೆ ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಶೇ 4 ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ ಮಸೂದೆಯನ್ನು ಅನುಮೋದಿಸುವಂತೆ ರಾಜ್ಯ ಸರ್ಕಾರ ಮತ್ತೆ ರಾಜ್ಯಪಾಲರ ಮೊರೆ ಹೋಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಹಿಂದೆ ರಾಜ್ಯ ಸರ್ಕಾರದ ಈ ವಿಧೇಯಕಕ್ಕೆ ಅನುಮೋದನೆ ನೀಡಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಸ್ಪಷ್ಟನೆ ಕೇಳಿದ್ದರು. ಜೊತೆಗೆ, ಮಸೂದೆ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.
ಈ ವಿಧೇಯಕ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕಾರಗೊಂಡಿತ್ತು. ನಂತರ ರಾಜ್ಯಪಾಲರ ಬಳಿ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಅನುಮೋದಿಸದೆ ಸರ್ಕಾರಕ್ಕೆ ಹೆಚ್ಚಿನ ಸ್ಪಷ್ಟನೆ ಕೇಳಿದ್ದರು. ಇದೀಗ, ರಾಜ್ಯ ಸರ್ಕಾರ ಹೆಚ್ಚಿನ ಸ್ಪಷ್ಟನೆಗಳೊಂದಿಗೆ ರಾಜ್ಯಪಾಲರಿಗೆ ಮತ್ತೆ ವಿಧೇಯಕ ಕಳುಹಿಸಿದ್ದು, ಅನುಮೋದಿಸುವಂತೆ ಮನವಿ ಮಾಡಿದೆ.
ಗೌರ್ನರ್ ಕೇಳಿದ ಸ್ಪಷ್ಟನೆ:
“ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶ ನೀಡುವುದಿಲ್ಲ. ಮುಸ್ಲಿಮರನ್ನು ಮಾತ್ರ ಒಳಗೊಂಡ ಹಿಂದುಳಿದ ವರ್ಗ ವರ್ಗ-II(ಬಿ)ಗೆ 4% ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಿತ ತಿದ್ದುಪಡಿಯನ್ನು ಧರ್ಮದ ಆಧಾರದ ಮೇಲೆ ಸಮುದಾಯಕ್ಕೆ ನೀಡಿದ ಮೀಸಲಾತಿ ಎಂದು ಅರ್ಥೈಸಿಕೊಳ್ಳಬಹುದು” ಎಂದು ರಾಜಭವನದ ಹೇಳಿಕೆಯಲ್ಲಿ ತಿಳಿಸಲಾಗಿತ್ತು. 15 ಮತ್ತು 16ನೇ ವಿಧಿಗಳು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನಿಷೇಧಿಸುತ್ತವೆ. ಯಾವುದೇ ದೃಢೀಕರಣ ಕ್ರಮವು ಸಾಮಾಜಿಕ-ಆರ್ಥಿಕ ಅಂಶಗಳನ್ನು ಆಧರಿಸಿರಬೇಕು” ಎಂದು ಒತ್ತಿಹೇಳುವ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯಪಾಲರು ಉಲ್ಲೇಖಿಸಿದ್ದರು.
ಅಸಂವಿಧಾನಿಕ ಟೀಕೆ:
ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಉದ್ದೇಶವನ್ನು ಹೊಂದಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆಯನ್ನು ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ರಾಜ್ಯದ ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಮಸೂದೆಯನ್ನು “ಅಸಂವಿಧಾನಿಕ” ಎಂದು ಟೀಕಿಸಿದ್ದವು. ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಮಸೂದೆಯನ್ನು ವಿರೋಧಿಸಿ ಎರಡೂ ಪಕ್ಷಗಳು ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದವು.
Previous Articleಇವರಿಗೆ ಮಾತ್ರ ಮಾಸ್ಕ್ ಕಡ್ಡಾಯ.
Next Article ಬಿಜೆಪಿಗೆ ಗುಡ್ ಬೈ ಹೇಳಲು 12 ಶಾಸಕರು ರೆಡಿ.
