ಬೆಂಗಳೂರು.
ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ ಆಡಳಿತದ ಪ್ರತಿಯೊಂದು ವಿಷಯದ ಬಗ್ಗೆ ಪ್ರತಿನಿತ್ಯ ಪತ್ರ ಬರೆದು ರಾಜ್ಯಪಾಲರು ವಿವರಣೆ ಕೇಳುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ರಾಜ್ಯಪಾಲರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಸ್ಥಾನ. ಅದನ್ನು ಮರೆತವರಂತೆ ರಾಜ್ಯದ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಪ್ರಥಮಬಾರಿಗೆ ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಹೇಳುತ್ತಿದ್ದಾರೆ ಎಂದು ಹೇಳಿದರು
ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕು ಇದೆ. ಆದರೆ, ದಿನನಿತ್ಯ ಪತ್ರ ಬರೆದು, ಪತ್ರದ ಮುಖಾಂತರ ಮಾಹಿತಿ ಕೊಡಿ ಅಂತ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದರು
ಸಂವಿಧಾನದ ಆಶಯಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ ಎಂದು ವಿವರಿಸಿದರು
ರಾಜ್ಯಪಾಲರಿಗೆ ಎಲ್ಲದಕ್ಕೂ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ಯಾವುದಕ್ಕೆ ಉತ್ತರಕೊಡಬೇಕು ಖಂಡಿತವಾಗಿಯೂ ಕೊಡುತ್ತೇವೆ. ಯಾವುದಕ್ಕೆ ಉತ್ತರಿಸುವ ಅನಿವಾರ್ಯತೆ ಇರುವುದಿಲ್ಲ, ಉತ್ತರ ಕೊಡುವುದಿಲ್ಲ. ಎಲ್ಲದಕ್ಕು ಉತ್ತರಿಸಬೇಕು ಅಂತೇನು ಇಲ್ಲ ಎಂದು ಹೇಳಿದರು.
35 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಸಂದರ್ಭ ಯಾವತ್ತು ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದ್ದ ಉದಾಹರಣೆಗಳೇ ಇಲ್ಲ ಎಂದು ಹೇಳಿದರು.